October 30, 2026
Friday, October 30, 2026
spot_img

ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ: ಮೃತಪಟ್ಟ ಐವರು ಕನ್ನಡಿಗರ ಗುರುತು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಶುಕ್ರವಾರ ಪತನಗೊಂಡಿದೆ. ಚಾಯ್ ಗ್ರಾಮದ ಸಮೀಪದ ಬೆಟ್ಟದ ಇಳಿಜಾರಿನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದ ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಐವರು ಪ್ರಯಾಣಿಕರು ಬೆಂಗಳೂರಿನವರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ VT-HCX ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಮಧ್ಯಾಹ್ನ ಸುಮಾರು 1.14ಕ್ಕೆ ಬದರಿನಾಥದಿಂದ ಹಾರಾಟ ಆರಂಭಿಸಿತ್ತು. ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್ ತಲುಪಬೇಕಿದ್ದ ವಿಮಾನವು ಜೋಶಿಮಠ ಕಣಿವೆಯ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಳೆದುಕೊಂಡಿದೆ. ಬಳಿಕ ಅದರ ಟ್ರ್ಯಾಕಿಂಗ್ ವ್ಯವಸ್ಥೆಯೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಹೆಲಿಕಾಪ್ಟರ್‌ನ ನಿಖರ ಸ್ಥಳ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ.

ಪ್ರಯಾಣಿಕರ ಗುರುತು ಪತ್ತೆ

ಅಧಿಕಾರಿಗಳ ಮಾಹಿತಿ ಪ್ರಕಾರ, ಹೆಲಿಕಾಪ್ಟರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಾದ ಅರುಣ್ ಸಾಲುಂಕೆ, ಎಚ್.ಎಸ್. ನಾಗರಾಜ, ಪ್ರತಾಪ್ ಬಚಿಹಳ್ಳಿ ನಿಂಗರಾಜನ್, ಸುಧೀರ್ ಕೆ. ಮತ್ತು ಶಂಕರಗೌಡ ವಿ.ಬಿ. ಬೆಂಗಳೂರಿನವರಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಚುರುಕು

ಚಾಯ್ ಗ್ರಾಮದ ಮೇಲ್ಭಾಗದ ಸೇನಾ ಶಿಬಿರದ ಸಮೀಪ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿರುವ ಮಾಹಿತಿ ಲಭಿಸಿದ ಬಳಿಕ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದರು. ನಂತರ ಜೆಪಿ ಪವರ್ ಹೌಸ್ ಸಮೀಪದ ಬೆಟ್ಟದ ಇಳಿಜಾರಿನಲ್ಲಿ ಅವಶೇಷಗಳು ಪತ್ತೆಯಾಗಿವೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Must Read