ಹೊಸದಿಗಂತ ವರದಿ ಮಂಗಳೂರು:
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೋನ್ ಗಳಿಗೆ SMS/ವಾಟ್ಸಾಪ್ ಮೂಲಕ ನಕಲಿ ಲಿಂಕ್ ಹಾಗೂ APK ಫೈಲ್ ಗಳನ್ನು ಕಳುಹಿಸಿ, ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು ನಾಗರಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಈ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ, ಈ ವಂಚನೆಯಿಂದ ಸಾರ್ವಜನಿಕರು ಒಟ್ಟು ಸುಮಾರು ರೂ. 44 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ ಆದ್ದರಿಂದ, ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಅಧಿಕೃತ ಇ-ಚಲನ್ ವೆಬ್ಸೈಟ್ ನಲ್ಲಿ ಅಥವಾ ಖುದ್ದಾಗಿ ಹತ್ತಿರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಿದ ನಂತರವೇ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಲು ಸಾರ್ವಜನಿಕರು ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ಕೋರಿದೆ.
ಮಾಡಬೇಕಾದ ಕ್ರಮಗಳು
ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬAಧಿಸಿದ ಇ-ಚಲನ್ ಬಾಕಿ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ವೆಬ್ಸೈಟ್ https://echallan.parivahan.nic.in ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡದ ಮೊತ್ತವನ್ನು ಪಾವತಿಸುವುದು.
ಇ-ಚಲನ್ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ, ಮಂಗಳೂರು ನಗರದ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ /ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು.
ಈ-ಚಾಲನ್ ನೋಟಿಸು ಪೋಸ್ಟ್ ಮೂಲಕ ಸ್ವೀಕೃತವಾಗಿದ್ದರೆ, ಅದರ ದಂಡವನ್ನು Mangaloreone / Karnatakaone ನ ಅಧಿಕೃತ ವೆಬ್ ಸೈಟ್ /ಅಪ್ ಮೂಲಕ ಪಾವತಿಸುವುದು.
ಮಾಡಬಾರದ ಕ್ರಮಗಳು
ಮೊಬೈಲ್ ಫೋನ್ ಗೆ ಬರುವ ಯಾವುದೇ APK ಫೈಲ್ ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಇಸ್ಟಾಲ್ ಮಾಡಬಾರದು.
ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು.
ಇ-ಚಲನ್ ದಂಡ ಪಾವತಿಸುವಂತೆ ಬರುವ ಅಪರಿಚಿತ ಲಿಂಕ್ ಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, ATM ಕಾರ್ಡ್ ವಿವರಗಳು, OTP ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
ಅಧಿಕೃತ ವೆಬ್ ಸೈಟ್ ಗಳಂತೆ ಕಾಣುವ ನಕಲಿ ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇವಲ https:// ಇರುವುದರಿಂದಲೇ ವೆಬ್ಸೈಟ್ ಅಧಿಕೃತವೆಂದು ಪರಿಗಣಿಸಬಾರದು.
ಸಾರ್ವಜನಿಕರು ಮೇಲ್ಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದು. ತಮ್ಮ ಮೊಬೈಲ್ ಫೋನ್ಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



