ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿಯ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ಧಪ್ಪ ನೀಲಣ್ಣವರ್ ಹಾಗೂ ಅವರ ಸಹಚರರಿಗೆ ಸೇರಿದ ಒಟ್ಟು 427.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅ.30ರಂದು ಈ ಕ್ರಮ ಕೈಗೊಳ್ಳಲಾಗಿದೆ. ಜಪ್ತಿ ಮಾಡಿದ ಆಸ್ತಿಗಳಲ್ಲಿ ಸುಮಾರು 367.78 ಕೋಟಿ ಮೌಲ್ಯದ ನಿಶ್ಚಿತ ಠೇವಣಿಗಳು, 47 ಬ್ಯಾಂಕ್ ಖಾತೆಗಳಲ್ಲಿರುವ 44.38 ಕೋಟಿ ಹಣ, 13.69 ಕೋಟಿ ಮೌಲ್ಯದ 42 ಸ್ಥಿರಾಸ್ತಿಗಳು ಹಾಗೂ 1.32 ಕೋಟಿ ಮೌಲ್ಯದ ಷೇರುಗಳು ಸೇರಿವೆ.
ಇದನ್ನೂ ಓದಿ:
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ 35 ಸಾವಿರಕ್ಕೂ ಅಧಿಕ ಹೂಡಿಕೆದಾರರಿಂದ ಸುಮಾರು 2,459.49 ಕೋಟಿ ಸಂಗ್ರಹಿಸಿದೆ ಎಂಬ ಆರೋಪವಿದೆ. ಮಾಸಿಕ ಶೇ.3ರಷ್ಟು ಖಚಿತ ಆದಾಯ ಹಾಗೂ ಹೊಸ ಹೂಡಿಕೆದಾರರನ್ನು ಪರಿಚಯಿಸಿದವರಿಗೆ ಶೇ.0.5ರಷ್ಟು ಕಮಿಷನ್ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಇ.ಡಿ. ತನಿಖೆಯಲ್ಲಿ ತಿಳಿಸಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು. ಬೆಳಗಾವಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಶೋಧ ನಡೆಸಿ ದಾಖಲೆ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಶಿವಾನಂದ ನೀಲಣ್ಣವರ್ ಅವರನ್ನು ಆ.13ರಂದು ಇ.ಡಿ. ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.



