ಹೊಸದಿಗಂತ ಮಂಗಳೂರು:
ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ನಡೆಸುತ್ತಿರುವ ಎಸ್‌ಐಟಿ, ಇಂದು ಸೌಜನ್ಯ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಮರುಸೃಷ್ಟಿ ನಡೆಸುವ ಕಾರ್ಯ ಹಮ್ಮಿಕೊಂಡಿದೆ.
ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಆಗಮಿಸಿರುವ ಎಸ್‌ಐಟಿ ತಂಡದ ಜೊತೆ ಎಫ್‌ಎಸ್‌ಎಲ್ ಸಿಬ್ಬಂದಿ ಕೂಡ ಇದ್ದಾರೆ. 14 ವರ್ಷದ ಹಿಂದೆ ಸೌಜನ್ಯ ಮೃತದೇಹ ಪತ್ತೆಯಾದ ಧರ್ಮಸ್ಥಳದ ಮಣ್ಣಸಂಕದ ಕಾಡಿಗೆ ಭೇಟಿ ನೀಡಿರುವ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಈ ಸಂಧರ್ಭ ಸೌಜನ್ಯ ಮೃತದೇಹ ಸಿಕ್ಕ ಜಾಗವನ್ನು ಕುಟುಂಬಸ್ಥರು ತೋರಿಸಿ ಖಚಿತಪಡಿಸಿದ್ದಾರೆ.
ಇದರೊಂದಿಗೆ ಸೌಜನ್ಯ ಅವರ ಮಾವ ಪುರಂದರಗೌಡ, ಸಂಬಂಧಿ ತುಕಾರಾಂ ಅವರಿಂದ ಕೂಡಾ ತಂಡ ಮಾಹಿತಿ ಸಂಗ್ರಹಿಸಿದೆ. ಸೋಕೋ ತಂಡ, ಬೆಂಗಳೂರು ಯೆಫೆಸ್ಸೆಲ್ ತಂಡ, ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ, ಪಂಚರು, ವೈದ್ಯರು, ಫೋಟೊ-ವೀಡಿಯೋ ತಂಡ ಕೂಡ ಸ್ಥಳದಲ್ಲಿ ಇದೆ.
2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸೌಜನ್ಯಾಳ ಅತ್ಯಾಚಾರ-ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ದಿ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ಕೈಗೊಂಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿ, ಸಿಬಿಐ ತನಿಖೆ ನಡೆಸಿದ್ದರೂ ಹಂತಕ ಮಾತ್ರ ಪತ್ತೆಯಾಗಿರಲಿಲ್ಲ. ಪೋಷಕರು, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಆದೇಶ ನೀಡಿತ್ತು.
ಆರಂಭದಲ್ಲಿ ತನಿಖೆ ನೇತೃತ್ವ ವಹಿಸಿದ್ದ ಐಜಿಪಿ ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳ ಮೇರೆಗೆ ಎಸ್‌ಐಟಿಯಿಂದ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಐಡಿ ವಿಭಾಗದ ಐಜಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.



