November 1, 2026
Sunday, November 1, 2026
spot_img

ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಬ್ರೇಕ್: ಧನುಷ್ ಸೌಹಾರ್ದತೆಗೆ ‘ಸೀನ್’ ಹೀರೋ ಬಿಗ್ ಥ್ಯಾಂಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಸೀನ್’ ಸಿನಿಮಾ ಇದೇ ನವೆಂಬರ್ 6, 2026ರಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಇತ್ತೀಚೆಗೆ ನಡೆದ ‘ಸೀನ್’ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಸೂರ್ಯ ಅವರು ನಟ ಧನುಷ್‌ಗೆ ಬಹಿರಂಗವಾಗಿ ಕೃತಜ್ಞತೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸೂರ್ಯ ಅವರ ‘ಸೀನ್’ ಸಿನಿಮಾ ತೆರೆಕಾಣುವ ಸಮಯದಲ್ಲೇ ಧನುಷ್ ಅಭಿನಯದ ‘ಓಂ: ಚಾಪ್ಟರ್ 1’ ಚಿತ್ರ ಕೂಡ ಬಿಡುಗಡೆಯಾಗಬೇಕಿತ್ತು. ಆದರೆ, ಬಾಕ್ಸ್ ಆಫೀಸ್ ಮುಖಾಮುಖಿ ತಪ್ಪಿಸಲು ಧನುಷ್ ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಆರಂಭದಲ್ಲಿ ‘ಜೈಲರ್ 2’ ಚಿತ್ರದ ಕಾರಣಕ್ಕೆ ಅಕ್ಟೋಬರ್ 16ರಿಂದ ದಿನಾಂಕ ಬದಲಾಯಿಸಿದ್ದ ಧನುಷ್, ಈಗ ಸೂರ್ಯ ಅವರ ಚಿತ್ರಕ್ಕೆ ದಾರಿ ಮಾಡಿಕೊಡಲು ಮತ್ತೆ ರಿಲೀಸ್ ಡೇಟ್ ಮುಂದೆ ಹಾಕಿದ್ದಾರೆ. ಧನುಷ್ ಅವರ ಈ ದೊಡ್ಡ ಮನಸ್ಸಿನ ನಿರ್ಧಾರಕ್ಕೆ ಸೂರ್ಯ ವೇದಿಕೆಯಲ್ಲೇ ಧನ್ಯವಾದ ತಿಳಿಸಿದರು.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ರೆಟ್ರೋ’ ಚಿತ್ರದ ಸಮಯದಿಂದ ಸೂರ್ಯ ಅವರನ್ನು ಅಭಿಮಾನಿಗಳು ‘ದಿ ಒನ್’ ಎಂಬ ಬಿರುದಿನಿಂದ ಕರೆಯುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೂರ್ಯ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ, “ನಾನು ಮುಂಬರುವ ದಿನಗಳಲ್ಲೂ ಈ ‘ದಿ ಒನ್’ ಶೀರ್ಷಿಕೆಯನ್ನು ಮುಂದುವರಿಸಬೇಕೇ?” ಎಂದು ಪ್ರಶ್ನಿಸಿದರು. ಅದಕ್ಕೆ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಯಿತು. ಸಾರ್ವಜನಿಕರ ಈ ಅದ್ಭುತ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ ಸೂರ್ಯ, ಈ ಬಿರುದನ್ನು ಮುಂದುವರಿಸಲು ಒಪ್ಪಿಕೊಂಡರು.

ತಮ್ಮ ‘ಸೀನ್’ ಚಿತ್ರದ ಬಗ್ಗೆ ಮಾತನಾಡಿದ ಸೂರ್ಯ, ಇದೊಂದು ಹೊಸ ರೀತಿಯ ಸಿನಿಮಾ ಅನುಭವ ನೀಡಲಿದೆ ಎಂದಿದ್ದಾರೆ. ಚಿತ್ರದಲ್ಲಿ ನಿಗೂಢತೆ, ಹುಚ್ಚಾಟ ಮತ್ತು ಹಾಸ್ಯ ಬೆರೆತಿದ್ದು, ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಬಂದು ಸಿನಿಮಾ ನೋಡಿದರೆ ಪಕ್ಕಾ ಮನರಂಜನೆ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ. ಈ ಬಾರಿಯ ದೀಪಾವಳಿಗೆ ‘ಸೀನ್’ ಪ್ರೇಕ್ಷಕರಿಗೆ ಅದ್ಭುತ ರಸದೌತಣ ನೀಡಲಿದೆ.

Must Read