ಹೊಸದಿಗಂತ ವರದಿ ಹಾವೇರಿ:
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ರಾಜ್ಯಮಟ್ಟದ ವಿಎ ಪರೀಕ್ಷೆಯಲ್ಲಿ ಟಾಪರ್ ಆಗಿ ಗಮನ ಸೆಳೆದಿದ್ದ ಅಭ್ಯರ್ಥಿ ಶಂಕರ ಬನ್ನೂರನನ್ನು ಶಿಗ್ಗಾಂವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಗೂಗಲ್ ಲೆನ್ಸ್ ಮೂಲಕ ಉತ್ತರಗಳನ್ನು ಹುಡುಕಿದ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳಿಂದ ಬೆಳಕಿಗೆ ಬಂದಿದೆ.
ಹಾನಗಲ್ಲನ ಶಂಕರ ಬನ್ನೂರು ಅಕ್ಟೋಬರ್ 4ರಂದು ಕೆಇಎ ನಡೆಸಿದ ವಿಎ ನೇಮಕಾತಿ ಪರೀಕ್ಷೆಯಲ್ಲಿ ಆಗಿದ್ದ. ಅಲ್ಲದೇ ಒಂದೂ ತಪ್ಪು ಆಗದೇ ಇರುವುದು ಅನುಮಾನವನ್ನು ಹೆಚ್ಚಿಸಿತ್ತು.
ಕೇವಲ 15 ದಿನಗಳ ಹಿಂದೆ ನಡೆದ ಕೆಎಸ್ಆರ್ಪಿ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಶಂಕರ ಬನ್ನೂರು ಕೇವಲ 25 ಅಂಕಗಳನ್ನು ಪಡೆದಿದ್ದ. ಅಲ್ಪಾವಧಿಯಲ್ಲೇ ಅಂಕಗಳಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು, ಅನುಮಾನ ಬಲಪಡಿಸಿತ್ತು.
ಈ ಹಿನ್ನೆಲೆಯಲ್ಲಿ ತನಿಖೆಗೆ ಕೆಇಎ ಹಾವೇರಿ ಡಿಸಿಗೆ ಪತ್ರ ಬರೆದಿತ್ತು. ಜಿಲ್ಲಾಧಿಕಾರಿ ನೇತೃತ್ವದ ತನಿಖಾ ತಂಡದ ತನಿಖೆ ವೇಳೆ ಶಿಗ್ಗಾಂವ ಪರೀಕ್ಷಾ ಕೇಂದ್ರದಲ್ಲಿ ಶಂಕರ ಬನ್ನೂರು ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ವೇಳೆ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಲಾಗಿತ್ತು. ಈ ವೇಳೆ ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಸಹಿತ ತೆರಳಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:
ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಶಂಕರನನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ತಡರಾತ್ರಿ ಶಿಗ್ಗಾಂವ ಪೊಲೀಸರಿಗೆ ಒಪ್ಪಿಸಿದ್ದಾರೆ, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಇದರಿಂದ ಪರೀಕ್ಷಾ ಕೇಂದ್ರದ ಒಳ-ಹೊರಗಿನ ಭದ್ರತಾ ವ್ಯವಸ್ಥೆ, ಅಭ್ಯರ್ಥಿಗಳ ತಪಾಸಣೆ ಹಾಗೂ ಪರೀಕ್ಷಾ ಮೇಲ್ವಿಚಾರಕರ ಕಾರ್ಯ ನಿರ್ವಹಣೆ ಕುರಿತು ತನಿಖೆ ತೀವ್ರಗೊಂಡಿದೆ. ಪರೀಕ್ಷಾ ಕೇಂದ್ರದೊಳಕ್ಕೆ ಮೊಬೈಲ್ ಒಯ್ದ ಘಟನೆ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.



