November 1, 2026
Sunday, November 1, 2026
spot_img

ಕನ್ನಡ ರಾಜ್ಯೋತ್ಸವದ ಸಂಭ್ರಮ: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

71ನೇ ಕನ್ನಡ ರಾಜ್ಯೋತ್ಸವದ ಸಡಗರ ಮನೆಮಾಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ವಿಶೇಷವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕರ್ನಾಟಕವನ್ನು ಶ್ರೀಮಂತ ಪರಂಪರೆ ಮತ್ತು ಭವಿಷ್ಯದ ತಂತ್ರಜ್ಞಾನದ ಹೆಮ್ಮೆಯ ನಾಡು ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಂಸ್ಕೃತಿಕ ಭವ್ಯತೆಗೆ ನಮನ

ಕರ್ನಾಟಕವು ಅಪಾರ ಸಾಧನೆಗಳು ಹಾಗೂ ಶ್ರೀಮಂತ ಸಾಧ್ಯತೆಗಳ ಪುಣ್ಯಭೂಮಿಯಾಗಿದೆ. ಇಲ್ಲಿನ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ-ವಿಚಾರಗಳು ಇಡೀ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ಅದ್ಭುತ ಕೌಶಲ್ಯಗಳ ಮೂಲಕ ಜಗತ್ತಿನಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಒದಗಿಸುವಲ್ಲಿ ಕನ್ನಡಿಗರು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಭವಿಷ್ಯದ ತಂತ್ರಜ್ಞಾನದ ನಾಯಕತ್ವ

ಮಾಹಿತಿ ತಂತ್ರಜ್ಞಾನ (IT), ಜೈವಿಕ ತಂತ್ರಜ್ಞಾನ (BT), ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಇಂದಿನ ಆಧುನಿಕ ಕೃತಕ ಬುದ್ಧಿಮತ್ತೆ (AI), ಸುಧಾರಿತ ಉತ್ಪಾದನೆ ಹಾಗೂ ನವೋದ್ಯಮಗಳ ವರೆಗೆ ಪ್ರತಿಯೊಂದು ವಲಯದಲ್ಲೂ ಕರ್ನಾಟಕದ ಚಾಣಾಕ್ಷತೆ ಹಾಗೂ ನೈಪುಣ್ಯತೆ ಪದೇ ಪದೇ ಸಾಬೀತಾಗಿದೆ ಎಂದು ಶ್ಲಾಘಿಸಿದ್ದಾರೆ.

“ಈ ವಿಶೇಷ ಸಂದರ್ಭವು ಕನ್ನಡಿಗರ ಒಟ್ಟಾರೆ ಜೀವನದಲ್ಲಿ ಸದಾ ಸಂತಸ ಮತ್ತು ಸಮೃದ್ಧಿಯನ್ನು ತರಲಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಹಾರೈಸಿದ್ದಾರೆ.

ಕನ್ನಡದಲ್ಲೇ ಹಾರೈಸಿದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಕರ್ನಾಟಕದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದು, ವೈಭವೋಪೇತ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರಾಗಿರುವ ಕರುನಾಡಿನ ಜನರು ತಮ್ಮ ಕಠಿಣ ಶ್ರಮ ಹಾಗೂ ಭಾರತದ ಜಾಗತಿಕ ಸ್ಥಾನಮಾನ ಹೆಚ್ಚಿಸುವಲ್ಲಿ ನೀಡಿರುವ ಅದ್ಭುತ ಕೊಡುಗೆಗಳ ಮೂಲಕ ತಮ್ಮ ಪರಂಪರೆಯನ್ನು ಮತ್ತಷ್ಟು ಬೆಳಗಿಸಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿ, ರಾಜ್ಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

Must Read

Skip to toolbar