ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಇತಿಹಾಸ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆಯೊಂದನ್ನು ಅಳಿಸಿಹಾಕುವ ಮೂಲಕ ಇಶಾನ್ ಹೊಸ ಎತ್ತರಕ್ಕೆ ಏರಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್, ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಮೈದಾನದ ಮೂಲೆ ಮೂಲೆಗೂ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಆಕರ್ಷಕ ಇನಿಂಗ್ಸ್ ನೆರವಿನಿಂದ ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿ ಭದ್ರವಾಗಿತ್ತು. 2022ರ ಋತುವಿನಲ್ಲಿ ಸೂರ್ಯಕುಮಾರ್ ಬರೋಬ್ಬರಿ 1,164 ರನ್ ಬಾರಿಸಿ ಈ ಕ್ರಿಕೆಟ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ, ಪ್ರಸಕ್ತ ವರ್ಷದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ 36 ಇನಿಂಗ್ಸ್‌ಗಳಿಂದ 1,170* ರನ್ ಕಲೆಹಾಕುವ ಮೂಲಕ ಸೂರ್ಯಕುಮಾರ್ ಅವರ ಬೃಹತ್ ದಾಖಲೆಯನ್ನು ಇತಿಹಾಸದ ಪುಟಗಳಿಗೆ ತಳ್ಳಿದ್ದಾರೆ.
ಇಶಾನ್ ಬರೆದ ಈ ಐತಿಹಾಸಿಕ ದಾಖಲೆಗೆ ಭಾರತದ ಮತ್ತೋರ್ವ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ ಕಡೆಯಿಂದ ತೀವ್ರ ಪೈಪೋಟಿ ಎದುರಾಗಿದೆ. ಅಭಿಷೇಕ್ ಈ ವರ್ಷ 38 ಇನಿಂಗ್ಸ್ ಆಡಿ ಈಗಾಗಲೇ 1,153 ರನ್ ಬಾರಿಸಿದ್ದು, ಇಶಾನ್ ಬೆನ್ನ ಹಿಂದೆ ನಿಂತಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಇವರಿಬ್ಬರ ನಡುವಿನ ರನ್ ರೇಸ್ ಇನ್ನಷ್ಟು ಕುತೂಹಲ ಮೂಡಿಸಿದೆ.



