November 1, 2026
Sunday, November 1, 2026
spot_img

ದೆಹಲಿಯಲ್ಲಿ ವಿಪಕ್ಷಗಳ ‘ರಣಕಹಳೆ’: ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಒಕ್ಕೂಟದ ಶಕ್ತಿ ಪ್ರದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಇಂದು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದಾರೆ. ‘ವೋಟ್ ಬಚಾವೋ, ದೇಶ್ ಬಚಾವೋ’ ಎಂಬ ಘೋಷಣೆಯಡಿ ಈ ಬೃಹತ್ ಜನಾಂದೋಲನ ಆಯೋಜಿಸಲಾಗಿದೆ.

ಒಂದೇ ವೇದಿಕೆಯಲ್ಲಿ ವಿಪಕ್ಷಗಳ ಘಟಾನುಘಟಿ ನಾಯಕರು


ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಿಂದ ಒಟ್ಟಾಗಿ ಹೊರಟ ಪ್ರತಿಪಕ್ಷಗಳ ಪ್ರಮುಖ ನಾಯಕರು ಈ ಬೃಹತ್ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖರು ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಆಕ್ರೋಶ

ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಾರ್ ಅವರ ತಕ್ಷಣದ ರಾಜೀನಾಮೆಗೆ ಪಟ್ಟು ಹಿಡಿದಿವೆ. ಜೊತೆಗೆ ಇವಿಎಂ (EVM) ಬದಲಿಗೆ ಹಳೇ ಬ್ಯಾಲೆಟ್ ಪೇಪರ್ ಪದ್ಧತಿಯನ್ನು ತರಬೇಕೆಂದು ಆಗ್ರಹಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ದಿಲ್ಲಿ ಸಿದ್ಧರಾಗಿ! ಮತ ಉಳಿಸಿ, ದೇಶ ಉಳಿಸಿ. ಕನಾಟ್ ಪ್ಲೇಸ್ ಬನ್ನಿ, ಜೊತೆಯಾಗಿ ಸಾಗೋಣ ಅಥವಾ ನೇರವಾಗಿ ರಾಮಲೀಲಾ ಮೈದಾನಕ್ಕೆ ಬನ್ನಿ, ಆದರೆ ಬರುವುದು ಕಡ್ಡಾಯ” ಎಂದು ಜನರಿಗೆ ಕರೆ ನೀಡಿದ್ದಾರೆ.

ಬಿಜೆಪಿಯಿಂದ 1984ರ ಸಿಖ್ ದಂಗೆಯ ಪ್ರತಿರೋಧ ರ‍್ಯಾಲಿ

ಮತ್ತೊಂದೆಡೆ, ವಿಪಕ್ಷಗಳ ರ‍್ಯಾಲಿಗೆ ಕೌಂಟರ್ ಕೊಡಲು ಆಡಳಿತಾರೂಢ ಬಿಜೆಪಿ ಪಶ್ಚಿಮ ದೆಹಲಿಯಲ್ಲಿ ಪ್ರತಿರೋಧ ಮೆರವಣಿಗೆ ಆರಂಭಿಸಿದೆ. 1984ರ ಸಿಖ್ ವಿರೋಧಿ ದಂಗೆಯ ವಾರ್ಷಿಕೋತ್ಸವದಂದೇ ಕಾಂಗ್ರೆಸ್ ರಾಜಕೀಯ ರ‍್ಯಾಲಿ ನಡೆಸುತ್ತಿರುವುದನ್ನು ಖಂಡಿಸಿರುವ ಬಿಜೆಪಿ, ಸಿಖ್ ಸಮುದಾಯದವರೊಂದಿಗೆ ಹರಿ ನಗರದಿಂದ ತಿಲಕ್ ನಗರ ಮೆಟ್ರೋ ನಿಲ್ದಾಣದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ನಾಯಕರು ಇದರ ನೇತೃತ್ವ ವಹಿಸಿದ್ದಾರೆ.

ಇದನ್ನೂ ಓದಿ:

ದಿಲ್ಲಿಯಲ್ಲಿ ಹೈ ಅಲರ್ಟ್

ರಾಜಕೀಯ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ಇಡೀ ದೆಹಲಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ದಿಲ್ಲಿ ಪೊಲೀಸ್ ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಒಳಗೊಂಡಂತೆ ಸುಮಾರು 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಡೀ ರಾಮಲೀಲಾ ಮೈದಾನದ ಸುತ್ತಮುತ್ತ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದ್ದು, ಮಲ್ಟಿ ಲೇಯರ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

Must Read