ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ವದೇಶಿ ಹೈಸ್ಪೀಡ್ ರೈಲು ತಂತ್ರಜ್ಞಾನಕ್ಕೆ ಹೊಸ ಅಧ್ಯಾಯ ಬರೆಯುವ ಪ್ರಯತ್ನ ವೇಗ ಪಡೆದುಕೊಂಡಿದೆ. ಬೆಂಗಳೂರಿನ ಬಿಇಎಂಎಲ್ನ ‘ಆದಿತ್ಯ’ ಘಟಕದಲ್ಲಿ ದೇಶದ ಮೊದಲ ಸ್ವದೇಶಿ ಬುಲೆಟ್ ರೈಲು ‘B28’ ನಿರ್ಮಾಣ ಹಂತದಲ್ಲಿದೆ. ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ನಲ್ಲಿ ಸಂಚರಿಸಲಿರುವ ಈ ರೈಲು, ವಿದೇಶಿ ತಂತ್ರಜ್ಞಾನ ಅವಲಂಬನೆಯನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಜಪಾನ್ ಮಾದರಿಗಿಂತ ಕಡಿಮೆ ವೆಚ್ಚದ ನಿರೀಕ್ಷೆ
ರೈಲ್ವೆ ಸಚಿವಾಲಯದ ಪ್ರಕಾರ, ಭಾರತದಲ್ಲಿ ನಿರ್ಮಾಣವಾಗುತ್ತಿರುವ B28 ರೈಲು ಸ್ವದೇಶಿ ಹೈಸ್ಪೀಡ್ ರೈಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿದೆ. ಆರಂಭದಲ್ಲಿ ಜಪಾನ್ನ E5 ಶಿಂಕಾನ್ಸೆನ್ ರೈಲು ಸೆಟ್ಗಳನ್ನು ಖರೀದಿಸುವ ಯೋಜನೆ ಇತ್ತು. ಆದರೆ ಹೆಚ್ಚಿನ ವೆಚ್ಚ ಮತ್ತು ವಿಳಂಬದ ಸಾಧ್ಯತೆ ಹಿನ್ನೆಲೆಯಲ್ಲಿ ಸ್ವಾವಲಂಬನೆಯ ದಿಕ್ಕಿನಲ್ಲಿ ಭಾರತ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷೆಗಾಗಿ ಜಪಾನ್ ಎರಡು ಶಿಂಕಾನ್ಸೆನ್ ರೈಲು ಸೆಟ್ಗಳನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ.
ಸುರಕ್ಷತಾ ಪರೀಕ್ಷೆಗೆ ಸಚಿವರ ಭೇಟಿ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನ ಬಿಇಎಂಎಲ್ ಘಟಕಕ್ಕೆ ಭೇಟಿ ನೀಡಿ ರೈಲಿನ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ರೈಲಿನ ಬೋಗಿ ರಚನೆಯ ಬಲ ಮತ್ತು ಸ್ಥಿರತೆಯನ್ನು ಪರೀಕ್ಷಿಸುವ ‘ಸ್ಕ್ವೀಜ್ ಟೆಸ್ಟ್’ ವೀಕ್ಷಿಸಿದರು. ನಿಯಂತ್ರಿತ ಒತ್ತಡ ಮತ್ತು ಎಳೆತದ ಮೂಲಕ ರೈಲಿನ ದೇಹದ ಸುರಕ್ಷತೆ ಹಾಗೂ ಬಾಳಿಕೆಯನ್ನು ಪರಿಶೀಲಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ.
ಇದನ್ನೂ ಓದಿ:
2027ರಲ್ಲಿ ಮೊದಲ ಸಂಚಾರದ ಗುರಿ
B28 ರೈಲಿನ ಗರಿಷ್ಠ ಪರೀಕ್ಷಾ ವೇಗ ಗಂಟೆಗೆ 280 ಕಿಲೋಮೀಟರ್ ಆಗಿರಲಿದೆ. ಈ ರೈಲು ವರ್ಷದ ಅಂತ್ಯದ ವೇಳೆಗೆ ಅಥವಾ 2027ರ ಆರಂಭದಲ್ಲಿ ಹೊರಬರುವ ನಿರೀಕ್ಷೆಯಿದೆ. 2027ರ ಆಗಸ್ಟ್ 15ರಂದು ಸೂರತ್–ವಾಪಿ ನಡುವಿನ 97 ಕಿ.ಮೀ. ಮಾರ್ಗದಲ್ಲಿ ಪ್ರಾಯೋಗಿಕ ಉದ್ಘಾಟನಾ ಸಂಚಾರ ನಡೆಸುವ ಸಾಧ್ಯತೆ ಇದೆ. ಮುಂಬೈ–ಅಹಮದಾಬಾದ್ ಕಾರಿಡಾರ್ 2029–30ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ.
ಮುಂದಿನ ಗುರಿ ಬೆಂಗಳೂರು–ಪುಣೆ?
ಮುಂದಿನ ಹೈಸ್ಪೀಡ್ ರೈಲು ಯೋಜನೆಗಳಲ್ಲಿ ಪ್ರಸ್ತಾವಿತ ಬೆಂಗಳೂರು–ಪುಣೆ ಕಾರಿಡಾರ್ಗೂ ಅವಕಾಶವಿರಬಹುದು ಎಂದು ಸಚಿವ ಅಶ್ವಿನಿ ವೈಷ್ಣವ್ ಸುಳಿವು ನೀಡಿದ್ದಾರೆ.



