ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಅತ್ಯಂತ ಮಹತ್ವದ ಹಾಗೂ ಚಾಣಾಕ್ಷ ನಿರ್ಧಾರವೊಂದಕ್ಕೆ ಮುಂದಾಗಿದೆ. ಕಳೆದ ಹರಾಜಿನಲ್ಲಿ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಯುವ ಆಲ್ರೌಂಡರ್ ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಐಪಿಎಲ್ 2026ರ ಸೀಸನ್ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಸಿಎಸ್ಕೆ ಫ್ರಾಂಚೈಸಿಯು ಪ್ರಶಾಂತ್ ವೀರ್ ಅವರನ್ನು ಬರೋಬ್ಬರಿ 14.20 ಕೋಟಿಗೆ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ‘ಅನ್ಕ್ಯಾಪ್ಡ್’ ಆಟಗಾರ ಎಂಬ ನೂತನ ದಾಖಲೆ ಬರೆದಿದ್ದರು. ಆದರೆ 2026ರ ಐಪಿಎಲ್ ಸೀಸನ್ನಲ್ಲಿ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆಡಿದ 6 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 90 ರನ್ಗಳನ್ನು ಮಾತ್ರ, ಜೊತೆಗೆ ಬೌಲಿಂಗ್ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಕಳಪೆ ಪ್ರದರ್ಶನ ಮತ್ತು ನೀಡುತ್ತಿರುವ ಸಂಭಾವನೆಯಿಂದಾಗಿ ಸಿಎಸ್ಕೆ ತಂಡದ ಹರಾಜಿನ ಪರ್ಸ್ ಮೊತ್ತಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಮಿನಿ ಹರಾಜಿಗೂ ಮುನ್ನ ಪ್ರಶಾಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿ, ತಮ್ಮ ಹರಾಜು ಖಾತೆಯಲ್ಲಿ 14.20 ಕೋಟಿ ಉಳಿಸಿಕೊಳ್ಳುವುದು ಚೆನ್ನೈನ ಮುಖ್ಯ ತಂತ್ರವಾಗಿದೆ.
ಆದರೆ ಈ ಯುವ ಆಟಗಾರನ ಮೇಲಿನ ನಂಬಿಕೆಯನ್ನು ಸಿಎಸ್ಕೆ ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಹರಾಜಿನಲ್ಲಿ ಇತರ ತಂಡಗಳ ಪೈಪೋಟಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಕಡಿಮೆ ಮೊತ್ತಕ್ಕೆ (ಬೈ-ಬ್ಯಾಕ್) ಅವರನ್ನು ಮರಳಿ ಖರೀದಿಸುವುದು ಫ್ರಾಂಚೈಸಿಯ ಯೋಜನೆಯಾಗಿದೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಬಲವಾದ ತಂಡವನ್ನು ಕಟ್ಟಲು ಚೆನ್ನೈ ಫ್ರಾಂಚೈಸಿಗೆ ಹೆಚ್ಚಿನ ಹಣದ ಅವಶ್ಯಕತೆಯಿದೆ. ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡುವುದರಿಂದ ಉಳಿಯುವ ಮೊತ್ತದಲ್ಲಿ ಇತರ ಅಗತ್ಯ ಆಟಗಾರರನ್ನು ಖರೀದಿಸಲು ಸಿಎಸ್ಕೆಗೆ ಅವಕಾಶ ಸಿಗಲಿದೆ. ಪ್ರಶಾಂತ್ ವೀರ್ಗೆ ಇದು ಮರುಜೀವ ಸಿಗುವ ಅವಕಾಶವೋ ಅಥವಾ ಬೇರೆ ತಂಡಕ್ಕೆ ಹಾರುವ ಹಾದಿಯೋ ಎಂಬುದನ್ನು ಮುಂಬರುವ ಹರಾಜಿನಲ್ಲಿ ನೋಡಬೇಕಿದೆ.



