ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ 2’ ಡಿಜಿಟಲ್ ಮನರಂಜನಾ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಸರಣಿ ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆಯ ನಿಮಿಷಗಳನ್ನು ದಾಟಿದ್ದು, ಕನ್ನಡದ ಪ್ರಾದೇಶಿಕ ಕಥೆಗಳಿಗೆ ಪ್ರೇಕ್ಷಕರಿಂದ ದೊರೆಯುತ್ತಿರುವ ಭರ್ಜರಿ ಬೆಂಬಲಕ್ಕೆ ಸಾಕ್ಷಿಯಾಗಿದೆ.
ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರ ಮೆಚ್ಚುಗೆ
ನಿಗೂಢತೆ, ರೋಚಕ ತಿರುವುಗಳು ಮತ್ತು ಮೈನಡುಗಿಸುವ ಸನ್ನಿವೇಶಗಳಿಂದ ಕೂಡಿರುವ ‘ಅಯ್ಯನ ಮನೆ 2’ ಆರಂಭದಿಂದಲೇ ವೀಕ್ಷಕರ ಗಮನ ಸೆಳೆದಿದೆ. ಪುರಾತನ ಹಿರಿಯರ ಮನೆಯ ಹಿನ್ನೆಲೆಯಲ್ಲಿನ ಕಥೆ, ವರ್ಷಗಳಿಂದ ಮುಚ್ಚಿಹೋಗಿದ್ದ ರಹಸ್ಯಗಳು ಹಾಗೂ ಅಸಹಜ ಘಟನೆಗಳ ಸುತ್ತ ಸಾಗುತ್ತದೆ.
ಕೇವಲ ಭಯಾನಕ ಸನ್ನಿವೇಶಗಳಿಗೆ ಸೀಮಿತವಾಗದೆ, ಕೌಟುಂಬಿಕ ಭಾವನೆಗಳು ಮತ್ತು ನಿಗೂಢತೆಯನ್ನು ಸಮನಾಗಿ ಬೆರೆಸಿರುವುದು ಸರಣಿಯ ವಿಶೇಷತೆ. ಈ ವಿಭಿನ್ನ ನಿರೂಪಣೆಯೇ ಪ್ರೇಕ್ಷಕರನ್ನು ಕಥೆಯೊಂದಿಗೆ ಬೆಸೆದುಕೊಂಡಿರುವ ಪ್ರಮುಖ ಅಂಶವಾಗಿದೆ.
ಕನ್ನಡ ಕಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆ
ಸರಣಿಯ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿರುವ ಜೀ ಕನ್ನಡ ಮತ್ತು ಜೀ ಪವರ್ ಮುಖ್ಯ ವಾಹಿನಿ ಅಧಿಕಾರಿ ಹಾಗೂ ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, 100 ಮಿಲಿಯನ್ ವೀಕ್ಷಣೆಯ ನಿಮಿಷಗಳ ಮೈಲಿಗಲ್ಲು ತಲುಪಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಕೌಟುಂಬಿಕ ಭಾವನೆಗಳು ಮತ್ತು ಅತಿಮಾನುಷ ಕೌತುಕದ ಕಥಾಹಂದರವನ್ನು ಕನ್ನಡ ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಿರುವುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಂಸ್ಕೃತಿಕವಾಗಿ ಬೇರೂರಿರುವ, ಸ್ಥಳೀಯ ಸೊಗಡಿನ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಜೀ5ನ ಉದ್ದೇಶ ಎಂದು ತಿಳಿಸಿದ್ದಾರೆ.



