ಹೊಸದಿಗಂತ ವರದಿ ವಾರಾಣಸಿ:
ಉತ್ತರಪ್ರದೇಶದ ವಾರಾಣಸಿಯ ಕಾಶಿ ಜ್ಞಾನಪೀಠದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶತಮಾನಕ್ಕೂ ಹಿಂದೆಯೇ ಭದ್ರ ಬುನಾದಿ ಹಾಕಲಾಗಿತ್ತು. 1920ರಲ್ಲಿಯೇ ಕಾಶಿ ಪೀಠದ ಆಗಿನ ಪೀಠಾಚಾರ್ಯರಾದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಕರ್ನಾಟಕ ಸಂಘವನ್ನು ಸ್ಥಾಪಿಸಿ ಕನ್ನಡದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕಾಶಿಯಲ್ಲಿ ಕನ್ನಡಿಗರ ಸಂಘಟನೆಗೆ ಐತಿಹಾಸಿಕ ಹೆಜ್ಜೆ
ವಾರಾಣಸಿಯ ಜಂಗಮವಾಡಿ ಮಠದಲ್ಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 1916ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ಕರ್ನಾಟಕದ ಹಲವು ಪ್ರಾಧ್ಯಾಪಕರು ಅಲ್ಲಿ ಸೇವೆ ಸಲ್ಲಿಸಲು ಬಂದಿದ್ದರು. ಅವರ ಆಶಯದಂತೆ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘ ಸ್ಥಾಪಿಸಲು ಕಾಶಿ ಪೀಠದ ಜಗದ್ಗುರುಗಳು ಶ್ರಮಿಸಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ:
ಕನ್ನಡ ಸಂಸ್ಕೃತಿಯ ನಿರಂತರ ಸೇವೆ
ಜಂಗಮವಾಡಿ ಮಠದ ಆವರಣದಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘವು ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ವಾತಾವರಣವನ್ನು ಉಳಿಸಿಕೊಂಡು ಬಂದಿದೆ. ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳು ಕಾಶಿ ಪೀಠದ ಆಶ್ರಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಕಾಶಿ–ಕರ್ನಾಟಕದ ಅವಿನಾಭಾವ ಸಂಬಂಧ
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ ದಂಪತಿ ಕಾರ್ಯಕ್ರಮ ಉದ್ಘಾಟಿಸಿ, ಕಾಶಿ ಪೀಠ ಮತ್ತು ಕರ್ನಾಟಕದ ನಡುವಿನ ಐತಿಹಾಸಿಕ ಸಂಬಂಧವನ್ನು ಸ್ಮರಿಸಿದರು. ಶತಮಾನ ಕಂಡ ಕರ್ನಾಟಕ ಸಂಘದ ರಾಜ್ಯೋತ್ಸವ ಉದ್ಘಾಟಿಸುವ ಅವಕಾಶ ದೊರೆತದ್ದು ಪುಣ್ಯವೆಂದರು.



