November 3, 2026
Tuesday, November 3, 2026
spot_img

ಒಮಾನ್ ಸಮುದ್ರ ತೀರದಲ್ಲಿ ಭಾರತೀಯ ನಾವಿಕ ಬ*ಲಿ: ವಾಣಿಜ್ಯ ಹಡಗುಗಳ ಸುರಕ್ಷತೆಗೆ ಭಾರತ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಒಮಾನ್ ಕರಾವಳಿಯಲ್ಲಿ ಭಾರತೀಯ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಗುಜರಾತ್ ಮೂಲದ ನಾವಿಕ ಮೃತಪಟ್ಟಿದ್ದಾರೆ. ‘ಎಂಎಸ್‌ವಿ ಅಲ್ ಜುಸುಫಿ’ ಹಡಗಿನಲ್ಲಿದ್ದ 14 ಭಾರತೀಯ ಸಿಬ್ಬಂದಿಯಲ್ಲಿ 13 ಮಂದಿಯನ್ನು ರಕ್ಷಿಸಲಾಗಿದ್ದು, ಅವರ ಸುರಕ್ಷಿತ ವಾಪಸಾತಿಗೆ ಭಾರತ ಕ್ರಮ ಕೈಗೊಂಡಿದೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸರ್ಕಾರ, ಪ್ರಾದೇಶಿಕ ಉದ್ವಿಗ್ನತೆ ಕಡಿಮೆ ಮಾಡಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದೆ.

ಅಪರಿಚಿತ ವೈಮಾನಿಕ ವಸ್ತುವಿನಿಂದ ದಾಳಿ

ನವೆಂಬರ್ 2ರಂದು ಒಮಾನ್‌ನ ಲಿಮಾ ಸಮೀಪ ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿಗೆ ಅಪರಿಚಿತ ವೈಮಾನಿಕ ವಸ್ತು ಅಪ್ಪಳಿಸಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ಗಾಯಗೊಂಡಿದ್ದ ಗುಜರಾತ್‌ನ ಗಂಧರ್ ನಹೀಮ್ ಅಜೀಜ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಒಮಾನ್ ಕರಾವಳಿ ರಕ್ಷಣಾ ಪಡೆ 13 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ.

ಮೃತ ನಾವಿಕನ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಸಚಿವರು, ಬದುಕುಳಿದವರ ನೆರವು ಮತ್ತು ಮೃತದೇಹದ ವಾಪಸಾತಿಗೆ ಭಾರತೀಯ ರಾಯಭಾರ ಕಚೇರಿ ಹಾಗೂ ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಖಂಡನೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ಆತಂಕಕಾರಿ ಎಂದು ಹೇಳಿದೆ. ನಾಗರಿಕ ಮೂಲಸೌಕರ್ಯ ಮತ್ತು ವಾಣಿಜ್ಯ ಹಡಗುಗಳನ್ನು ಸಂಘರ್ಷದ ಗುರಿಯಾಗಿಸಬಾರದು ಎಂದು ಒತ್ತಾಯಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಸುರಕ್ಷಿತ ಹಾಗೂ ನಿರ್ಬಂಧರಹಿತ ಸಂಚಾರವನ್ನು ಪುನಃಸ್ಥಾಪಿಸಬೇಕು ಎಂಬುದು ಭಾರತದ ನಿಲುವಾಗಿದೆ.

ಜಾಗತಿಕ ವ್ಯಾಪಾರಕ್ಕೂ ಸಂಘರ್ಷದ ಪರಿಣಾಮ

ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ನಾಗರಿಕ ಹಡಗುಗಳ ಮೇಲಿನ ದಾಳಿಯಿಂದ ಜಾಗತಿಕ ದಕ್ಷಿಣದ ರಾಷ್ಟ್ರಗಳು ಹೆಚ್ಚಿನ ಪರಿಣಾಮ ಎದುರಿಸುತ್ತಿವೆ ಎಂದು ಗಮನ ಸೆಳೆದಿದ್ದರು. ಸಮುದ್ರ ಮಾರ್ಗಗಳ ಅಡಚಣೆ ಇಂಧನ, ಆಹಾರ ಮತ್ತು ರಸಗೊಬ್ಬರಗಳ ಪೂರೈಕೆ ಹಾಗೂ ಬೆಲೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಎಚ್ಚರಿಸಿದ್ದರು.

Must Read

Skip to toolbar