November 4, 2026
Wednesday, November 4, 2026
spot_img

ಕಾಂಗ್ರೆಸ್‌ಗೆ ಮನುಷ್ಯತ್ವವೇ ಇಲ್ಲ: ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಮನುಷ್ಯತ್ವವಿಲ್ಲದ ರಾಜ್ಯ ಸರ್ಕಾರ ಹಾಲು, ಮೊಸರಿನ ಬೆಲೆ ಏರಿಸಿ ರಾಜ್ಯದ ಬಡ ಜನರ ಬದುಕಿನ ಮೇಲೆ ಮೇಲೆ ಬರೆ ಎಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ನಗರದಲ್ಲಿ ಬುಧವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಅಭಿಯಾನ “ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ” ಪಾದಯಾತ್ರೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೇ.30 ರಿಂದ 40ರಷ್ಟು ಬಸ್ ಪ್ರಯಾಣ ದರ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಿದೆ. ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಿದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ರೈತರು, ಬಡವರು, ಹಿಂದೂ, ಯುವಕರು, ಮಹಿಳಾ ವಿರೋಧಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲು ಕಬ್ಬು ಬೆಳೆಗಾರರಿಗೆ ಒಂದು ಸಾವಿರ ರೂ. ಧನ ಸಹಾಯ ನೀಡಲಿ. ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಲು ಹೋದ ಮುಖ್ಯಮಂತ್ರಿ ಖಾಲಿ ಜೇಬು ತೋರಿಸಿ ಹಿಂದಿರುಗಿವುದನ್ನು ನೋಡಿದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೂಡಲೆ ರೈತರ ರಕ್ಷಣೆಗೆ ಬರಬೇಕು. ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಗುರುವಾರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ದೇಶದಲ್ಲಿ ಹನ್ನೆರಡು ಬಾರಿ ಎಸ್.ಐ.ಆರ್. ಪ್ರಕ್ರಿಯೆ ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹತ್ತು ಸಾರಿ ಎಸ್.ಐ.ಆರ್. ಆಗಿದೆ. ಆಗ ಇಲ್ಲದ ವಿರೋಧ ಈಗ ಏಕೆ? ಚುನಾವಣಾ ಆಯೋಗದ ಮೇಲೆ ಆಗ ಬಿಜೆಪಿ. ಜನರಲ್ಲಿ ಅಪ ನಂಬಿಕೆ ಹುಟ್ಟಿಸಲಿಲ್ಲ. ನಮ್ಮ ಕಡುವೈರಿ ದೇಶಗಳ ಜೊತೆ ಸೇರಿಕೊಂಡು ರಾಹುಲ್‌ಗಾಂಧಿ ದೇಶದ ದ್ರೋಹದ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ. ನ್ಯಾಯಾಂಗ, ನೀಟ್ ಪರೀಕ್ಷೆ ಬಗ್ಗೆ ಅಪ ಪ್ರಚಾರ ಮಾಡುತ್ತ ಯುವಕರನ್ನು ದಿಕ್ಕು ತಪ್ಪಿಸುತ್ತಿರುವುದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದೆಂದು ನುಡಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಂವಿಧಾನವನ್ನು ಬಗಲಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ಕಾಂಗ್ರೆಸ್‌ನಿಂದ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗಿರುವುದರಿಂದ ಸಂವಿಧಾನ ಉಳಿಸಬೇಕಿದೆ. 1975, ಜೂ. 25ರಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿ ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು ಅದೇ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆಗ ಅನೇಕರು ಜೈಲಿಗೆ ಹೋದರು. 21 ದಿನಗಳ ಕಾಲ ದೇಶ ಕತ್ತಲಲ್ಲಿತ್ತು. 75 ಬಾರಿ ಇದುವರೆವಿಗೂ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಸಂವಿಧಾನದ ಮೇಲೆ ಹಲ್ಲೆ ನಡೆಸುತ್ತಿರುವ ಕಾಂಗ್ರೆಸ್‌ಗೆ ಎಸ್‌ಐಆರ್.ವಿರುದ್ದ ಹೋರಾಡುವ ನೈತಿಕತೆಯಿಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ:

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಡಾ.ಎಂ.ಚಂದ್ರಪ್ಪ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಟಿ.ಕುಮಾರಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ಸದಸ್ಯರಾದ ಕೆ.ಎಂ.ಸುರೇಶ್, ಚಿದಾನಂದಗೌಡ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಎಸ್.ತಿಪ್ಪೇಸ್ವಾಮಿ, ಎಸ್.ವಿ.ರಾಮಚಂದ್ರಪ್ಪ, ಬಸವರಾಜ್‌ನಾಯ್ಕ, ಜ್ಯೋತಿಗಣೇಶ್, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಅನೇಖ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Must Read