November 5, 2026
Thursday, November 5, 2026
spot_img

ರೈತರ ನೆರವಿಗೆ ಧಾವಿಸಿ, ನೀರಾವರಿಗೆ ವೇಗ ನೀಡಿ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕನ್ನಡ ರಾಜ್ಯೋತ್ಸವದ ಶುಭಾಶಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಹಲವು ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

ನವೆಂಬರ್ 4ರಂದು ಮುಖ್ಯಮಂತ್ರಿಗಳು ಬರೆದ ಆರು ಪುಟಗಳ ಪತ್ರದಲ್ಲಿ ನೀರಾವರಿ ಯೋಜನೆಗಳ ಅನುಮೋದನೆ, ಬರ ಪರಿಹಾರ ಬಿಡುಗಡೆ, ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆ ಹಾಗೂ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆರ್ಥಿಕ ನೆರವು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

ಮೆಟ್ರೋ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ

ರಾಜ್ಯದ ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿದ್ದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿರುವ ಸಿಎಂ ಡಿಕೆಶಿ, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ರೈಲ್ವೆ ಮೂಲಸೌಕರ್ಯಕ್ಕೆ ಕೇಂದ್ರ ನೀಡಿರುವ ಹೂಡಿಕೆಯನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಮೋದಿ ಅವರ ಪ್ರಸ್ತಾವಿತ ಭೇಟಿಯನ್ನೂ ಸ್ವಾಗತಿಸಿದ್ದಾರೆ.

ಬರ ಪರಿಹಾರ, ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಒತ್ತು

ರಾಜ್ಯದ ಬರ ಪರಿಸ್ಥಿತಿ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿಯವರ ಭೇಟಿಯ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ, ಕಬ್ಬಿನ ಎಫ್‌ಆರ್‌ಪಿ ಮೂಲ ಚೇತರಿಕೆ ಪ್ರಮಾಣವನ್ನು ಶೇ.9.5ಕ್ಕೆ ಮರುಸ್ಥಾಪನೆ ಹಾಗೂ ಕಬ್ಬು ಆಧಾರಿತ ಎಥನಾಲ್ ಬೆಲೆ ಪರಿಷ್ಕರಣೆಗೆ ಅನುಕೂಲಕರ ನಿರ್ಧಾರ ಕೈಗೊಳ್ಳುವಂತೆ ಕೋರಿದ್ದಾರೆ.

ನೀರಾವರಿ ಯೋಜನೆಗಳಿಗೆ ತ್ವರಿತ ಅನುಮೋದನೆ

ಮೇಕೆದಾಟು, ಕಳಸಾ-ಬಂಡೂರಿ, ಮೇಲ್ಭದ್ರಾ, ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಅನುಮೋದನೆಗೆ ವೇಗ ನೀಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ಮೇಕೆದಾಟು ಯೋಜನೆಯು ದಕ್ಷಿಣ ಕರ್ನಾಟಕದ ಕುಡಿಯುವ ನೀರಿನ ಅಗತ್ಯಕ್ಕೆ ಮಹತ್ವದ್ದಾಗಿದೆ ಎಂದು ವಿವರಿಸಿದ್ದಾರೆ.

ಬೆಂಗಳೂರಿಗೆ ವಿಶೇಷ ಪ್ಯಾಕೇಜ್, ಬರ ಪರಿಹಾರ ಬಿಡುಗಡೆಗೆ ಮನವಿ

ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮೂಲಸೌಕರ್ಯದ ಒತ್ತಡವನ್ನು ಉಲ್ಲೇಖಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಕೋರಿದ್ದಾರೆ. ರಾಜ್ಯದ 240 ತಾಲ್ಲೂಕುಗಳಲ್ಲಿ 226 ಬರಪೀಡಿತವಾಗಿದ್ದು, ಕೇಂದ್ರದಿಂದ ಬರ ಪರಿಹಾರ ಬಿಡುಗಡೆಗೂ ಮನವಿ ಮಾಡಿದ್ದಾರೆ.

Must Read

Skip to toolbar