November 5, 2026
Thursday, November 5, 2026
spot_img

ಮತ್ತೆ ಬಣ್ಣ ಹಚ್ಚಲಿದ್ದಾರೆ ‘ದಳಪತಿ’: ಜನಕಲ್ಯಾಣಕ್ಕಾಗಿ ಸಿಎಂ ವಿಜಯ್ ಹೊಸ ಅವತಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಖ್ಯಾತ ನಟ ದಳಪತಿ ವಿಜಯ್ ಅವರು ರಾಜ್ಯದ ಆಡಳಿತಾತ್ಮಕ ಕೆಲಸಗಳಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ. ರಾಜಕೀಯ ಪ್ರವೇಶಿಸುವಾಗಲೇ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ವಿಜಯ್, ಇನ್ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಈಗ ಅವರ ಅಭಿಮಾನಿಗಳಿಗೆ ಹಾಗೂ ತಮಿಳುನಾಡಿನ ಜನತೆಗೆ ಒಂದು ದೊಡ್ಡ ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ಸಿಎಂ ವಿಜಯ್ ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ.

ವಿಜಯ್ ಅವರು ನಟಿಸುತ್ತಿರುವುದು ಯಾವುದೇ ಹೊಸ ಸಿನಿಮಾಗಾಗಿ ಅಲ್ಲ. ಬದಲಾಗಿ, ತಮಿಳುನಾಡು ಸರ್ಕಾರ ಪ್ರಾಯೋಜಿತ ವಿಶೇಷ ಜಾಗೃತಿ ಜಾಹೀರಾತಿನಲ್ಲಿ. ಸಾಮಾನ್ಯವಾಗಿ ಸರ್ಕಾರಗಳು ತಮ್ಮ ಯೋಜನೆಗಳನ್ನು ಜನರಿಗೆ ತಲುಪಿಸಲು ಸಿನಿಮಾ ನಟರನ್ನು ಅಥವಾ ಬ್ರಾಂಡ್ ಅಂಬಾಸಿಡರ್‌ಗಳನ್ನು ಬಳಸಿಕೊಳ್ಳುತ್ತವೆ. ಆದರೆ, ತಮಿಳುನಾಡಿನಲ್ಲಿ ಸ್ವತಃ ಮುಖ್ಯಮಂತ್ರಿ ವಿಜಯ್ ಅವರಿಗಿಂತ ದೊಡ್ಡ ಜನಪ್ರಿಯ ಮುಖ ಮತ್ತೊಂದಿಲ್ಲ. ಈ ಕಾರಣಕ್ಕಾಗಿ ಸರ್ಕಾರದ ಜನಕಲ್ಯಾಣ ಯೋಜನೆಗಳು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಲಿ ಎಂಬ ಉದ್ದೇಶದಿಂದ ತಾವೇ ಈ ಜಾಹೀರಾತಿನಲ್ಲಿ ನಟಿಸಲು ವಿಜಯ್ ನಿರ್ಧರಿಸಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಜಾಹೀರಾತುಗಳು ಸರಳವಾಗಿರುತ್ತವೆ. ಆದರೆ ಈ ಪ್ರಾಜೆಕ್ಟ್ ಅನ್ನು ಅತ್ಯಂತ ಬೃಹತ್ ವೆಚ್ಚದಲ್ಲಿ, ಅದ್ಧೂರಿ ಸಿನಿಮಾ ಮಾದರಿಯಲ್ಲೇ ನಿರ್ಮಿಸಲು ಯೋಜಿಸಲಾಗಿದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಈ ಜಾಹೀರಾತನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು, ಚಿತ್ರರಂಗದ ಅನುಭವಿ ತಾಂತ್ರಿಕ ತಂಡವೇ ಇದರ ಹಿಂದೆ ಕೆಲಸ ಮಾಡಲಿದೆ.

ಈ ವಿಶೇಷ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಖ್ಯಮಂತ್ರಿ ವಿಜಯ್ ಅವರು ಎರಡು ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ತಮಿಳುನಾಡಿನ 5 ಕ್ಷೇತ್ರಗಳ ಉಪಚುನಾವಣೆ ಮುಗಿದ ತಕ್ಷಣವೇ ಈ ಶೂಟಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ರಾಜಕೀಯ ಬದುಕಿನ ನಡುವೆಯೂ ತಮ್ಮ ನೆಚ್ಚಿನ ನಟ ಮತ್ತೆ ಬಣ್ಣ ಹಚ್ಚುತ್ತಿರುವುದು ಅವರ ಕೋಟ್ಯಂತರ ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ.

Must Read

Skip to toolbar