ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 15 ದಿನದಲ್ಲಿ ಏಳು ಮಂದಿಯನ್ನು ಕೊಂದಿರುವ ಪ್ರಕರಣದ ಬಗ್ಗೆ ರೋಚಕ ಅಂಶಗಳು ಹೊರಬೀಳುತ್ತಿವೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಅ.16ರಿಂದ ಅ.31ರವರೆಗೆ ಹಂತ ಹಂತವಾಗಿ ಏಳು ಜನರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ತಾನು ಕೊಲೆ ಮಾಡುವುದಕ್ಕೆ ಮಗಳು ಹರ್ಷಿಣಿ ಕೂಡ ಸಾಥ್ ನೀಡಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಏಳು ಜನರನ್ನು ಹಂತ ಹಂತವಾಗಿ ಕೊಲೆ ಮಾಡಿದ ಆರೋಪಿ ಇಂದುಶೇಖರ್‌ಗೆ ಪತ್ನಿ ತವರುಮನೆಯ ಜನರು ಸತ್ತ ಮೇಲೂ ದ್ವೇಷ ತೀರಿಲ್ಲ. ಮೃತದೇಹಗಳ ಮೇಲೆ ಆತ ಕಲ್ಲನ್ನು ಎತ್ತಿ ಹಾಕಿದ್ದಾನೆ. ಮುಖಗಳನ್ನು ಜಜ್ಜಿ ಗುರುತುಸಿಗಂತೆ ಮಾಡಿ ಕೈ ಕಾಲು ಕಟ್ಟಿ ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ನಿ ಕುಟುಂಬದಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿಯ ಆಸ್ತಿ ಇತ್ತು. ಪತ್ನಿ ಹಾಗೂ ಆಕೆಯ ಕುಟುಂಬದ ಮೇಲಿನ ದ್ವೇಷ ಜೊತೆಗೆ ಆಸ್ತಿಯ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ. ಇಂದುಶೇಖರನ ಬಾಮೈದ ಶಂಕರ್‌ಗೆ ನಳಿನಿಯನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದೇ ತಪ್ಪಾಗಿ ಹೋಯಿತು. ಮಗಳ ಜೀವ ಹೋಯ್ತು ಎಂದು ನಳಿನಿ ತಾಯಿ ಕಣ್ಣೀರಿಟ್ಟಿದ್ದಾರೆ.
ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿತ್ಯವೂ ಮಗಳು ಕರೆ ಮಾಡುತ್ತಿದ್ದಳು. ಆದರೆ ಶುಕ್ರವಾರ ಬೆಳಗ್ಗೆ ಕರೆ ಮಾಡಿರಲಿಲ್ಲ. ಈ ವೇಳೆ ಏನೋ ಗಲಾಟೆ ಆಗಿರಬೇಕು ಮಗಳು ಕರೆ ಮಿಸ್ ಮಾಡೋಕೆ ಸಾಧ್ಯ ಇಲ್ಲ ಎನಿಸಿ ಮನೆ ಬಳಿ ಹೋದೆ. ಆದರೆ ಮನೆ ಬಳಿ ಇರಲಿಲ್ಲ. ಕರೆ ಮಾಡಿದರೂ ರೆಸ್ಪಾನ್ಸ್ ಇರಲಿಲ್ಲ. ಅಳಿಯನಿಗೆ ಕರೆ ಮಾಡಿದರೆ ಆತನ ನಂಬರ್ ಕೂಡ ಸ್ವಿಚ್ ಆಫ್ ಇತ್ತು. ಒಂದು ದಿನವೂ ಅಳಿಯನ ಫೋಟನ್ ಆಫ್ ಆಗಿಲ್ಲ. ಹೀಗಾಗಿ ಭಯ ಆಗಿ ಪೊಲೀಸರಿಗೆ ದೂರು ನೀಡಿದೆ ಎಂದು ನಳಿನಿ ತಾಯಿ ಹೇಳಿದ್ದಾರೆ.
ನಾದಿನಿ ಟ್ರಿಪ್ ಹೋಗಿದ್ದಾಳೆ ಎಂದು ಇಂದುಶೇಖರ ಕಥೆ ಹೇಳಿದ. ಭಾಷ್ಯಂ ಸರ್ಕಲ್ ಮನೆಯಲ್ಲಿ ಬೀಗ ಹಾಕಿದ್ದನ್ನು ನಾವು ಗಮನಿಸಲಿಲ್ಲ. ಕ್ರೂರ ಮನಸ್ಸಿನ ಅವನಿಗೆ ಕ್ರೂರವಾದ ಶಿಕ್ಷೆ ಕೊಡಬೇಕು. ಮೂರು ಕೋಟಿ ಬೆಲೆಬಾಳುವ ಮನೆಗಾಗಿ ನಿತ್ಯವೂ ಜಗಳ ಆಗುತ್ತಿತ್ತು.ನಮ್ಮ ಮನೆಯ ಹಿಂಭಾಗದಲ್ಲೇ ಆಫೀಸ್ ಇತ್ತು, ಅಳಿಯ ಚೆನ್ನಾಗಿಯೇ ಬಂದು ಹೋಗುತ್ತಿದ್ದ. ಆದರೆ ಇಷ್ಟೆಲ್ಲಾ ಸೋಗು ಹಾಕಿ ಕೊನೆಗೆ ಅತ್ತೆ, ದೊಡ್ಡ ಮಗ, ದೊಡ್ಡ ಸೊಸೆ ಮತ್ತು ಮೊಮ್ಮಗ ಸೇರಿದಂತೆ ಇಡೀ ಕುಟುಂಬವನ್ನೇ ಮನೆಗೆ ಕರೆಸಿಕೊಂಡು ಒಂದೇ ಸಮನೆ ಕೊಂದು ಹಾಕಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.



