ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2027ರ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಹತ್ತಿರವಾಗುತ್ತಿದ್ದಂತೆ ಫ್ರಾಂಚೈಸಿಗಳ ನಡುವಿನ ಟ್ರೇಡಿಂಗ್ ಹಂಗಾಮ ಕಾವು ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್ನ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಾಲ್ವರು ಪ್ರಮುಖ ಆಟಗಾರರ ಬೃಹತ್ ವಿನಿಮಯ ನಡೆದಿದೆ. ಐಪಿಎಲ್ ಈ ಒಪ್ಪಂದಕ್ಕೆ ಅಧಿಕೃತ ಮುದ್ರೆ ಒತ್ತಿದೆ.
ಈ ವಿಶೇಷ ಒಪ್ಪಂದದಲ್ಲಿ ಯಾವುದೇ ಹಣದ ವಹಿವಾಟು ನಡೆದಿಲ್ಲ. ಸನ್ರೈಸರ್ಸ್ ಹೈದರಾಬಾದ್ ತಂಡವು ಇಂಗ್ಲೆಂಡ್ನ ಸ್ಫೋಟಕ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಅವರನ್ನು ಚೆನ್ನೈಗೆ ಬಿಟ್ಟುಕೊಟ್ಟಿದೆ. ಇದಕ್ಕೆ ಪ್ರತಿಯಾಗಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾರತದ ವೇಗಿ ಖಲೀಲ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ನಾಥನ್ ಎಲಿಸ್ ಅವರನ್ನು ಹೈದರಾಬಾದ್ ತಂಡಕ್ಕೆ ವರ್ಗಾಯಿಸಿದೆ.
ಈ ವರ್ಗಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದು ಲಿಯಾಮ್ ಲಿವಿಂಗ್ಸ್ಟೋನ್. ಕಳೆದ ಹರಾಜಿನಲ್ಲಿ ಹೈದರಾಬಾದ್ ಇವರನ್ನು 13 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಕಳೆದ ಸೀಸನ್ನಲ್ಲಿ ಆಡಿದ 2 ಪಂದ್ಯಗಳಲ್ಲಿ ಕೇವಲ 15 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇವರನ್ನು ಕೇವಲ 6 ಕೋಟಿ ರೂ. ಸಂಭಾವನೆಗೆ ಪಡೆದುಕೊಂಡಿದೆ. ಇದರಿಂದ ಲಿವಿಂಗ್ಸ್ಟೋನ್ಗೆ 7 ಕೋಟಿ ರೂ. ನಷ್ಟವಾಗಿದೆ.
ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ ತಮ್ಮ ಹಳೆಯ ಬೆಲೆ 3 ಕೋಟಿ ರೂ.ಗೆ ಸಿಎಸ್ಕೆ ಪಾಲಾದರೆ, ಮೆಗಾ ಹರಾಜಿನಲ್ಲಿ 4.8 ಕೋಟಿಗೆ ಖರೀದಿಯಾಗಿದ್ದ ಖಲೀಲ್ ಅಹ್ಮದ್ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅದೇ ಮೊತ್ತಕ್ಕೆ ಸನ್ರೈಸರ್ಸ್ಗೆ ಸೇರಿದ್ದಾರೆ. ಆಸ್ಟ್ರೇಲಿಯಾದ ನಾಥನ್ ಎಲಿಸ್ 2 ಕೋಟಿ ಮೂಲ ಬೆಲೆಗೆ ಹೈದರಾಬಾದ್ ಬೋರ್ಡ್ಗೆ ಸೇರ್ಪಡೆಯಾಗಿದ್ದಾರೆ.
ಮುಂದಿನ ಸೀಸನ್ಗೆ ಬಲವಾದ ತಂಡ ಕಟ್ಟಲು ಎರಡೂ ಫ್ರಾಂಚೈಸಿಗಳು ಈ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಈ ಬದಲಾವಣೆಗಳು ಮೈದಾನದಲ್ಲಿ ಹೇಗೆ ಕೆಲಸ ಮಾಡಲಿವೆ ಎಂಬುದನ್ನು ಕಾದು ನೋಡಬೇಕಿದೆ.



