ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಆನ್ಲೈನ್ ಡೆಲಿವರಿ ಆ್ಯಪ್ ಮೂಲಕ ಚಾಕು ಪಾರ್ಸೆಲ್ ಕಳುಹಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಇದು ರಾಜ್ಯ ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಕಾರ್ಯಕರ್ತರ ಕೈವಾಡವಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ನಿಯೋಗವು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.
https://x.com/BJP4Karnataka/status/2119047159995879469?a=QmRoD27K2SAXi7gK3lw&s=20
ಮನೆಯ ಸುತ್ತುವರಿದು ಭಯದ ವಾತಾವರಣ
ಛಲವಾದಿ ನಾರಾಯಣಸ್ವಾಮಿ ಅವರ ಇತ್ತೀಚಿನ ರಾಜಕೀಯ ಹೇಳಿಕೆಯಿಂದ ಕೆರಳಿರುವ ಎನ್ಎಸ್ಯುಐ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸುಮಾರು 10 ರಿಂದ 20 ಬೇರೆ ಬೇರೆ ಮೊಬೈಲ್ ಸಂಖ್ಯೆಗಳನ್ನು ಬಳಸಿ ಆನ್ಲೈನ್ ಮೂಲಕ ಮಾರಕ ಆಯುಧಗಳನ್ನು ಆರ್ಡರ್ ಮಾಡಲಾಗಿತ್ತು. ಅಷ್ಟೇ ಅಲ್ಲದೆ, 8 ರಿಂದ 10 ಜನ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿ ಅವರ ನಿವಾಸದ ಗೇಟ್ ಸುತ್ತುವರಿದು ನಿರಂತರವಾಗಿ ಧರಣಿ ನಡೆಸಿ, ಮನೆಯಲ್ಲಿದ್ದವರಲ್ಲಿ ಭಯ ಹುಟ್ಟಿಸುವ ವಾತಾವರಣ ಸೃಷ್ಟಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸರಕಾರದ ವಿರುದ್ಧ ಬಿಜೆಪಿ ಆಕ್ರೋಶ
ಇಂತಹ ಗೂಂಡಾ ಸಂಸ್ಕೃತಿಗೆ ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ನೇರ ಕಾರಣ ಎಂದು ಬಿಜೆಪಿ ನಿಯೋಗ ದೂರಿದೆ. ವಿಪಕ್ಷ ನಾಯಕರ ಮನೆಯ ಸುತ್ತಮುತ್ತ ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನಿವಾಸಗಳಿದ್ದರೂ ಇಂತಹ ಘಟನೆ ನಡೆದಿರುವುದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ ಎಂದು ನಿಯೋಗ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ:
‘ಬ್ಲಿಂಕಿಟ್’ ಸಂಸ್ಥೆಯ ಪರವಾನಗಿ ರದ್ದತಿಗೆ ಆಗ್ರಹ
ಯಾವುದೇ ಪರಿಶೀಲನೆ ನಡೆಸದೆ ಮಾರಕ ಆಯುಧಗಳನ್ನು ಪಾರ್ಸೆಲ್ ಮೂಲಕ ವಿತರಿಸಿದ ಆನ್ಲೈನ್ ಸಂಸ್ಥೆ ‘ಬ್ಲಿಂಕಿಟ್’ ನಡವಳಿಕೆಯೂ ಸಂಶಯಾಸ್ಪದವಾಗಿದ್ದು, ಅದರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅಲ್ಲದೆ, ನಿರಂತರವಾಗಿ ಬೆದರಿಕೆ ಹಾಕುತ್ತಿರುವವರನ್ನು ಪತ್ತೆ ಹಚ್ಚಿ ‘ಗೂಂಡಾ ಕಾಯ್ದೆ’ಯಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಛಲವಾದಿ ಎಚ್ಚರಿಕೆ
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣಸ್ವಾಮಿ, “ಕಳೆದ ಒಂದು ವಾರದಿಂದ ಕಾಂಗ್ರೆಸ್ ಗೂಂಡಾಗಳು ನನ್ನ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಈಗ ನೇರವಾಗಿ ಮನೆಗೆ ಚಾಕು-ಚೂರಿ ಕಳುಹಿಸಿ ಪ್ರಚೋದನೆ ನೀಡುತ್ತಿದ್ದಾರೆ. ಧಮ್ಕಿಗಳ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ, ಸತ್ಯ ಹೇಳಲು ನಾನು ಹೆದರುವುದಿಲ್ಲ. ಪೊಲೀಸ್ ಆಯುಕ್ತರು ಕ್ರಮದ ಭರವಸೆ ನೀಡಿದ್ದಾರೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಾದಿ ಹಿಡಿಯುತ್ತೇವೆ” ಎಂದು ಎಚ್ಚರಿಸಿದ್ದಾರೆ.



