November 7, 2026
Saturday, November 7, 2026
spot_img

30 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಅಯೋಧ್ಯೆ: ಸರಯೂ ತೀರದಲ್ಲಿ ಡ್ರೋನ್‌ಗಳ ಮೂಲಕ ‘ರಾಮಾಯಣ ವೈಭವ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಮನ ನಗರಿ ಅಯೋಧ್ಯೆ ಮತ್ತೊಂದು ಐತಿಹಾಸಿಕ ದೀಪೋತ್ಸವಕ್ಕೆ ಸಜ್ಜಾಗಿದೆ. ಸರಯೂ ನದಿಯ 56 ಘಾಟ್‌ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ 10ನೇ ಆವೃತ್ತಿಯ ದೀಪೋತ್ಸವವನ್ನು ನವೆಂಬರ್ 7ರಂದು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭವ್ಯ ಸರಯೂ ಮಹಾ ಆರತಿ, 2,100ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ರಾಮಾಯಣದ ದೃಶ್ಯಾವಳಿ ಹಾಗೂ ಐದು ದೇಶಗಳ ಕಲಾವಿದರ ಸಾಂಸ್ಕೃತಿಕ ಪ್ರದರ್ಶನಗಳು ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

ದೀಪೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ

ಶುಕ್ರವಾರವೇ ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಸರಯೂ ನದಿ ತೀರದಲ್ಲಿ ಸಾಮೂಹಿಕ ಆರತಿಯ ಅಂತಿಮ ತಾಲೀಮು ನಡೆಸಲಾಗಿದೆ. ನಗರದ ಪ್ರಮುಖ ರಸ್ತೆಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ವಿದ್ಯುತ್ ದೀಪಗಳು ಹಾಗೂ ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿದೆ. ರಾಮಜನ್ಮಭೂಮಿ ದೇವಸ್ಥಾನವೂ ವಿಶೇಷ ಬೆಳಕಿನ ಅಲಂಕಾರದಿಂದ ಕಂಗೊಳಿಸುತ್ತಿದೆ.

ಉಪರಾಷ್ಟ್ರಪತಿ ಸಮ್ಮುಖದಲ್ಲಿ ಮೊದಲ ದೀಪ ಬೆಳಗುವಿಕೆ

ಈ ವರ್ಷದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಮ್ ಕಿ ಪೈಡಿ ಘಾಟ್‌ನಲ್ಲಿ ಉಪರಾಷ್ಟ್ರಪತಿಗಳು ಮೊದಲ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

2,147 ಮಂದಿಯಿಂದ ಸರಯೂ ಮಹಾ ಆರತಿ

ಸುಮಾರು 2,147 ಮಂದಿ ಜನಪ್ರತಿನಿಧಿಗಳು, ಸ್ಥಳೀಯ ಸದಸ್ಯರು ಹಾಗೂ ಸಾರ್ವಜನಿಕರು ಸಾಮೂಹಿಕ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಮಂತ್ರಗಳ ಪಠಣದೊಂದಿಗೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಸರಯೂ ತೀರಕ್ಕೆ ವಿಶೇಷ ಮೆರುಗು ನೀಡಲಿದೆ.

ಆಕಾಶದಲ್ಲಿ ಮೂಡಲಿದೆ ರಾಮಾಯಣದ ಚಿತ್ರಣ

ರಾತ್ರಿ 2,100 ಡ್ರೋನ್‌ಗಳ ಪ್ರದರ್ಶನದಲ್ಲಿ ರಾಮಾಯಣದ ಪ್ರಮುಖ ಪ್ರಸಂಗಗಳನ್ನು ಆಕಾಶದಲ್ಲಿ ಮೂಡಿಸಲಾಗುತ್ತದೆ. ಐದು ದೇಶಗಳ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಭಕ್ತರು ಮತ್ತು ಪ್ರವಾಸಿಗರ ಹೆಚ್ಚಿನ ಆಗಮನ ನಿರೀಕ್ಷಿಸಿ ಬಿಗಿ ಪೊಲೀಸ್ ಭದ್ರತೆಯನ್ನೂ ಕೈಗೊಳ್ಳಲಾಗಿದೆ.

Must Read

Skip to toolbar