November 8, 2026
Sunday, November 8, 2026
spot_img

ಮಧ್ಯಪ್ರಾಚ್ಯದಲ್ಲಿ ಮತ್ತೆ ಹೊತ್ತಿಕೊಂಡ ಯುದ್ಧದ ಕಿಡಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತೈಲ ಘಟಕಗಳೇ ಹೌತಿಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಜಗತ್ತಿನ ಪ್ರಮುಖ ತೈಲ ಕಂಪನಿ ‘ಸೌದಿ ಅರಾಮ್ಕೊ’ದ ಆಡಳಿತ ಕಚೇರಿಯನ್ನು ಗುರಿಯಾಗಿಸಿಕೊಂಡು ಭಾನುವಾರ ಭೀಕರ ದಾಳಿಯ ಯತ್ನ ನಡೆದಿದೆ. ಸೌದಿ ಅರೇಬಿಯಾದ ಇಂಧನ ಸಚಿವಾಲಯವು ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದೆ.

ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದಾದ್ಯಂತ ಆರು ಪ್ರಮುಖ ಆಯಕಟ್ಟಿನ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಘೋಷಿಸಿಕೊಂಡ ಬೆನ್ನಲ್ಲೇ ಈ ಆತಂಕಕಾರಿ ಬೆಳವಣಿಗೆ ನಡೆದಿದೆ.

ಕಟ್ಟಡಕ್ಕೆ ಹಾನಿ

ದಾಳಿಯನ್ನು ತಡೆಯುವ ಪ್ರಯತ್ನದಲ್ಲಿ ಡ್ರೋನ್‌ನ ತೀವ್ರತೆಯಿಂದಾಗಿ ಕರಗಿದ ಚೂರುಗಳು ಅರಾಮ್ಕೊ ಆಡಳಿತ ಕಟ್ಟಡದ ಮೇಲೆ ಬಿದ್ದಿವೆ. ಇದರಿಂದ ಕಟ್ಟಡಕ್ಕೆ ಸಣ್ಣಪ್ರಮಾಣದ ಹಾನಿಯಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸಂಬಂಧಪಟ್ಟ ಭದ್ರತಾ ಸಂಸ್ಥೆಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.

ಆರು ಕಡೆ ದಾಳಿ ನಡೆಸಿದ ಹೌತಿಗಳು

ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ನೀಡಿರುವ ಹೇಳಿಕೆಯ ಪ್ರಕಾರ, ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಥೆಗಳು, ಸೇನಾ ನೆಲೆಗಳು ಹಾಗೂ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ಒಟ್ಟು 6 ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಯೆಮೆನ್ ಮೇಲಿನ ಸೌದಿ ದಾಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಎಲ್ಲೆಲ್ಲಿ ಟಾರ್ಗೆಟ್?

 ರಿಯಾದ್ ವಿಮಾನ ನಿಲ್ದಾಣ ಮತ್ತು ಅರಾಮ್ಕೊ ತೈಲ ಸಂಗ್ರಹಾಗಾರಗಳಲ್ಲದೆ, ಖುರೈಸ್‌ನಲ್ಲಿರುವ ಅರಾಮ್ಕೊ ಘಟಕ, ದಾವದ್ಮಿ ಭಾಗದಲ್ಲಿರುವ ಪಂಪಿಂಗ್ ಸ್ಟೇಷನ್ ಸಂಖ್ಯೆ 8, ನಜ್ರಾನ್‌ನಲ್ಲಿರುವ ನ್ಯಾಷನಲ್ ಗಾರ್ಡ್ ಕ್ಯಾಂಪ್ ಹಾಗೂ ಅಲ್-ಜಾವ್ಫ್ ಪ್ರಾಂತ್ಯದ ಪೂರ್ವದಲ್ಲಿರುವ ಸೌದಿ ಸೇನಾ ತುಕಡಿಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಹೌತಿಗಳು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:

ಮತ್ತೆ ಹೊತ್ತಿಕೊಂಡ ಯುದ್ಧದ ಕಿಡಿ

2022 ರಲ್ಲಿ ಸೌದಿ ಅರೇಬಿಯಾ ಮತ್ತು ಹೌತಿ ಬಂಡುಕೋರರ ನಡುವೆ ಏರ್ಪಟ್ಟಿದ್ದ ಕದನ ವಿರಾಮದ ಒಪ್ಪಂದವು ಮುರಿದುಬಿದ್ದ ನಂತರ ಉಭಯ ದೇಶಗಳ ನಡುವೆ ಹಗೆತನ ತಾರಕಕ್ಕೇರಿದೆ. ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯ ಮತ್ತು ವಿಮಾನ ನಿಲ್ದಾಣಗಳನ್ನೇ ಗುರಿಯಾಗಿಸಿ ಹೌತಿಗಳು ಸರಣಿ ದಾಳಿ ನಡೆಸುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

Must Read

Skip to toolbar