ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಮಂಡ್ಯ ಜಿಲ್ಲೆಯಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದೆ. ಇದರಲ್ಲಿ ಮೂರು ಅಂಗಡಿಗಳಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,ಸಂಭ್ರಮದಲ್ಲಿ ನಡೆಯಬೇಕಿದ್ದ ದೀಪಾವಳಿ ಹಬ್ಬ ಬೇಸರ ತರಿಸಿದೆ. ಚಿನಕುರಳಿ ಗ್ರಾಮದ ಮಹದೇವ್ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು,ರವಿ ಎಂಬುವವರಿಗೆ ಸೇರಿದ ಪಾತ್ರೆ ಅಂಗಡಿಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ನಿನ್ನೆಯಷ್ಟೇ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಇಂದು ಮುಂಜಾನೆ ಇದ್ದಕ್ಕಿದ್ದಂತೆ ರವಿ ಅವರ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಮೆಡಿಕಲ್ ಸ್ಟೋರ್ ಹಾಗೂ ಪ್ರಾವಿಷನ್ ಸ್ಟೋರ್‌ಗೂ ಬೆಂಕಿ ತಗುಲಿದೆ. ಮೂರು ಅಂಗಡಿಗಳಲ್ಲಿದ್ದ ಪಾತ್ರೆಗಳು, ಔಷಧಿಗಳು ಮತ್ತು ದಿನಸಿ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.



