ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನ ಪ್ರಸಿದ್ಧ ಗಡಿಯಾರ ಗೋಪುರವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಸ್ಥಳೀಯರು ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ನೂರಾರು ಪ್ರವಾಸಿಗರು ಇಲ್ಲಿ ಜಮಾಯಿಸಿ, ಹಣತೆಗಳನ್ನು ಹಚ್ಚುವ ಮೂಲಕ ಸಡಗರ ಸಂಭ್ರಮದಿಂದ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ.
ಮನಸೆಳೆದ ಶಾಂತಿಯುತ ವಾತಾವರಣ
ಗುಜರಾತ್ ಹಾಗೂ ದೆಹಲಿಯಿಂದ ಬಂದಿದ್ದ ಪ್ರವಾಸಿಗರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಲಾಲ್ ಚೌಕ್‌ನಲ್ಲಿ ದೀಪಾವಳಿ ಆಚರಿಸುತ್ತಿರುವುದು ಇದೇ ಮೊದಲು. ಕಾಶ್ಮೀರ ಈಗ ತುಂಬಾ ಬದಲಾಗಿದೆ. ಇಲ್ಲಿನ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣ ನೋಡಿ ಭಾರೀ ಖುಷಿಯಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಗಡಿಕಾಯುವ ಸೈನಿಕರ ದೀಪಾವಳಿ
ಒಂದೆಡೆ ಇಡೀ ದೇಶ ಕುಟುಂಬಸ್ಥರೊಂದಿಗೆ ದೀಪಾವಳಿ ಆಚರಿಸುತ್ತಿದ್ದರೆ, ಇತ್ತ ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ದೇಶ ಕಾಯುವ ಭಾರತೀಯ ಸೇನೆಯ ಯೋಧರು ತಮ್ಮ ಹೆತ್ತವರಿಂದ ದೂರವಿದ್ದೇ ಹಬ್ಬ ಆಚರಿಸಿದ್ದಾರೆ. ತಮ್ಮ ತುಕಡಿಗಳಲ್ಲೇ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ದೀಪಗಳನ್ನು ಹಚ್ಚಿದ ಸೈನಿಕರು, ದೇಶದ ಶಾಂತಿ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿದರು.
ಒಂದು ಕಾಲದಲ್ಲಿ ಉದ್ವಿಗ್ನತೆಗೆ ಹೆಸರಾಗಿದ್ದ ಲಾಲ್ ಚೌಕ್‌ನಲ್ಲಿ ಇವತ್ತು ಯಾವುದೇ ಭಯವಿಲ್ಲದೆ ಸಾರ್ವಜನಿಕರು ಮುಕ್ತವಾಗಿ ದೀಪಾವಳಿ ಆಚರಿಸಿರುವುದು ಬದಲಾದ ಕಾಶ್ಮೀರದ ಹೊಸ ದಿನಗಳಿಗೆ ಸಾಕ್ಷಿಯಾಗಿದೆ.



