November 9, 2026
Monday, November 9, 2026
spot_img

ಪೋಷಕರೇ ಈ ವಿಷಯಗಳ ಬಗ್ಗೆ ಗಮನ ಇರಲಿ, ನಿಮ್ಮ ಮಕ್ಕಳಿಗೆ ಈ ರೀತಿ ಹೇಳೋ ನೆಂಟರನ್ನು ದೂರವೇ ಇಡಿ!!

ನಿಮ್ಮ ಮನೆಗಳಲ್ಲಿ ಮುದ್ದಾಗಿ ಸಾಕಿರುವ ಮಕ್ಕಳಿಗೆ ಯಾವುದೋ ಒಂದು ಫಂಕ್ಷನ್‌ನಲ್ಲಿ ನೆಂಟರು ದಡ್ಡ ಎಂದೋ, ಸಣ್ಣ ಎಂದೋ, ದಪ್ಪ ಎಂದೋ ಹೇಳಿಬಿಡುತ್ತಾರೆ. ಇಷ್ಟು ದಿನಗಳು ತಮ್ಮ ಬಣ್ಣ, ದೇಹ ಅಥವಾ ಬುದ್ಧಿವಂತಿಕೆ ಬಗ್ಗೆ ಒಪಿನಿಯನ್‌ ಇಲ್ಲದ ಮಕ್ಕಳಿಗೆ ನಾನು ಸಣ್ಣ ಇದ್ದೀನಾ, ದಪ್ಪ ಇದ್ದೀನಾ, ದಡ್ಡಿನಾ ಎನ್ನುವ ಅನುಮಾನಗಳು ಆರಂಭವಾಗುತ್ತವೆ. ಜಗತ್ತು ಇರೋದೇ ಹೀಗೆ ನಮ್ಮ ಮನೆಯಲ್ಲಿ ಮಾತ್ರ ರಿಯಾಲಿಟಿ ಮುಚ್ಚಿಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಸೃಷ್ಟಿಯಾಗುತ್ತದೆ. ನಿಮ್ಮ ಮಕ್ಕಳನ್ನು ಯಾರೇ ಹತ್ತಿರದ ನೆಂಟರಾಗಲಿ, ಕುಟುಂಬದವರು ಆಗಲಿ ಮಕ್ಕಳಿಗೆ ಬೇಸರವಾಗುವಂತರ ಮಾತನಾಡಿದರೆ ಅದನ್ನು ನೀವು ಸಹಿಸಬೇಕು ಎಂದಿಲ್ಲ. ತಕ್ಷಣಕ್ಕೆ ಪರಿಸ್ಥಿತಿಯನ್ನು ನಿಭಾಯಿಸಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಸೂಕ್ತ. ಈ ವಿಷಯಗಳ ಬಗ್ಗೆ ಸದಾ ಗಮನ ಇರಲಿ..

ಸೆನ್ಸಿಟಿವ್‌ ಎಂದು ಕರೆಯಲು ಬಿಡಬೇಡಿ

ನಿಮ್ಮ ಕುಟುಂಬದವರು ಮಕ್ಕಳನ್ನು ಅಳುಬುರುಕ ಎಂದೋ, ನಾಚಿಕೆ ಸ್ವಭಾವದವರು ಎಂದೋ, ಸೆನ್ಸಿಟಿವ್‌ ಎಂದೋ ಕರೆಯಲು ಬಿಡಬೇಡಿ. ಭಾವನೆಗಳನ್ನು ಅರಿತುಕೊಂಡು, ಭಾವನೆಗಳನ್ನು ತಿಳಿಸುವುದರಿಂದ ಜನ ನಮ್ಮನ್ನು ವೀಕ್‌ ಎಂದುಕೊಳ್ಳುತ್ತಾರೆ ಎಂದು ಮಕ್ಕಳು ಭಾವಿಸುತ್ತಾರೆ. ಎಷ್ಟೇ ನೋವಾಗಲಿ ಅಳುವಂತಿಲ್ಲ, ಮನಸ್ಸಿಗೆ ನೋವಾದರೆ ಹೇಳುವಂತಿಲ್ಲ ಎನ್ನುವುದನ್ನು ಮಕ್ಕಳು ಕಲಿಯುತ್ತಾರೆ.

ಹುಡುಗಿಯಂತೆ ಅಳಬೇಡ

ನಿಮ್ಮ ಮಗ ಅಳುವಾಗ ಯಾರೇ ಬಂದು ನೀನು ಹುಡುಗಿಯಲ್ಲ ಅಳುವುದನ್ನು ನಿಲ್ಲಿಸು ಎಂದು ಹೇಳಿದರೆ ಅದನ್ನು ಒಪ್ಪಬೇಡಿ. ಅಳುವುದಕ್ಕೆ ಲಿಂಗವಿಲ್ಲ. ನೋವಾದರೆ, ಬೇಸವಾದರೆ ಅಳಬಹುದು, ಅಳುವುದರಿಂದ ಯಾರೂ ವೀಕ್‌ ಎಂದು ಪರಿಗಣಿಸುವುದಿಲ್ಲ ಎನ್ನುವುದನ್ನು ಹೇಳಿಕೊಡಿ.

ಅಮ್ಮನ ಬಾಲ ನೀನು

ಮಕ್ಕಳು ಒಂದು ವಯಸ್ಸಿನವರೆಗೂ ಅಮ್ಮನ ಬಾಲವಾಗಿಯೇ ಇರುತ್ತಾರೆ. ಅಮ್ಮ ಎಲ್ಲಿ ಹೋದರೂ ಹಿಂದೆ ಹೋಗುತ್ತಾರೆ. ಅಮ್ಮ ಕಾಣಿಸದಿದ್ದರೆ ಬೇಸರವಾಗುತ್ತಾರೆ. ಹೆಚ್ಚು ಜನರಿರುವ ಕಡೆ ಹೋಗುವಾಗ ಮಕ್ಕಳನ್ನು ಆದಷ್ಟು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅಮ್ಮನ ಬಾಲ ಎಂದೆಲ್ಲ ಕೂಗಲು ಬಿಡಬೇಡಿ.

ಕಂಪೇರ್‌ ಮಾಡಿಸಬೇಡಿ

ಸಾಮಾನ್ಯವಾಗಿ ಯಾವುದೇ ಸಮಾರಂಭಗಳಿಗೆ ಹೋದಾಗ ಬರುವ ಜನರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ನಿಮ್ಮ ಮಕ್ಕಳನ್ನು ಹೋಲಿಸುತ್ತಾರೆ. ನಮ್ಮ ಮಗು ನಿಮ್ಮ ಮಗುವಿಗಿಂತ ಬೆಟರ್‌ ಎಂದು ಮಕ್ಕಳ ಬಳಿ ಮಾತನಾಡುತ್ತಾರೆ. ಇದನ್ನು ಅವಾಯ್ಡ್‌ ಮಾಡಿ. ತಿನ್ನುವುದು, ಓದುವುದು ಇತ್ಯಾದಿ ಸ್ಪರ್ಧೆ ಅಲ್ಲ. ನಿಮ್ಮ ಮಕ್ಕಳ ಮೇಲೆ ಮಾತ್ರ ಗಮನ ಇರಲಿ. ಹೋಲಿಕೆಗೆ ಅವಕಾಶ ಮಾಡಿಕೊಡಬೇಡಿ.

ಕೆಟ್ಟ ಹುಡುಗ/ಹುಡುಗಿ

ನಿಮ್ಮ ಮಗು ತಪ್ಪು ಮಾಡಿದರೆ ತಪ್ಪನ್ನು ತಿದ್ದುವಂತೆ ಹೇಳಿ ಅದನ್ನು ಬಿಟ್ಟು ಮಗುವೇ ತಪ್ಪು ಎನ್ನಬೇಡಿ. ಕೆಟ್ಟದ್ದು ಬಿಹೇವಿಯರ್‌ ಅಷ್ಟೇ ಪರ್ಸನಾಲಿಟಿ ಅಲ್ಲ. ತಪ್ಪು ಸರಿ ತಿಳಿಸಿದರೆ ಮಕ್ಕಳು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ.

ಬುಲ್ಲಿ ಮಾಡಲು ಬಿಡಬೇಡಿ


ತಮಾಷೆಗೆಂದು ನಿಮ್ಮ ಮಕ್ಕಳಿಗೆ ಗದರುವುದು, ಗೋಳು ಹೊಯ್ದುಕೊಳ್ಳುವುದು, ಹೆದರಿಸುವುದು ಇತ್ಯಾದಿಗಳನ್ನು ಮಾಡುವುದನ್ನು ಸಹಿಸಬೇಡಿ. ಇದರಿಂದ ಮಕ್ಕಳಿಗೆ ಯಾವ ಒಳ್ಳೆಯದೂ ಆಗುವುದಿಲ್ಲ. ಈ ರೀತಿ ಸಂದರ್ಭದಲ್ಲಿ ಕೆಟ್ಟದು ಎಂದುಕೊಂಡರೂ ಪರವಾಗಿಲ್ಲ. ಮಗುವನ್ನು ಕರೆದುಕೊಂಡು ಹೋಗಿ.

Must Read