ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ತೆರೆಯ ಮೇಲೆ ಅಪ್ಪಳಿಸಿ ನಾಲ್ಕು ದಿನವಾಗಿದ್ದು, ಭಾನುವಾರ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ. ರಜೆ ಹಾಗೂ ದೀಪಾವಳಿ ಲಾಂಗ್ ವೀಕೆಂಡ್ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಿನಿಮಾ ನೋಡಿದ್ದಾರೆ.
ವಿಶ್ವಾದ್ಯಂತ ಸುಮಾರು 500 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿರುವ ಈ ಚಿತ್ರ, ಭಾನುವಾರದ ರಜಾದಿನದಂದು ದೇಶ ವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ.
ಭಾನುವಾರ ಸಿನಿಮಾ ಒಟ್ಟಾರೆ 21,770 ಪ್ರದರ್ಶನಗಳನ್ನು ಕಂಡಿದೆ. ಇದರಿಂದ ಬರೋಬ್ಬರಿ 56.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಭಾಷಾವಾರು ಲೆಕ್ಕಾಚಾರ ನೋಡುವುದಾದರೆ, ಹಿಂದಿ ಆವೃತ್ತಿಯು 17,755 ಪ್ರದರ್ಶನಗಳಿಂದ ಅತ್ಯಧಿಕ ಅಂದರೆ 36.75 ಕೋಟಿ ಗಳಿಸಿದೆ. ಇನ್ನುಳಿದಂತೆ ಕನ್ನಡ ಆವೃತ್ತಿಯಿಂದ 910 ಪ್ರದರ್ಶನಗಳಲ್ಲಿ 7.25 ಕೋಟಿ ರೂಪಾಯಿ, ತೆಲುಗು ಆವೃತ್ತಿಯಿಂದ 1,621 ಪ್ರದರ್ಶನಗಳಲ್ಲಿ 6.25 ಕೋಟಿ ರೂಪಾಯಿ, ತಮಿಳು ಆವೃತ್ತಿಯಿಂದ 756 ಪ್ರದರ್ಶನಗಳಲ್ಲಿ 3.15 ಕೋಟಿ ರೂಪಾಯಿ ಹಾಗೂ ಮಲಯಾಳಂ ಆವೃತ್ತಿಯಿಂದ 728 ಪ್ರದರ್ಶನಗಳಲ್ಲಿ 2.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಭಾನುವಾರ ಭಾರತದ ಚಿತ್ರಮಂದಿರಗಳಲ್ಲಿ ಶೇಕಡಾ 38.0 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.
ನಾಲ್ಕು ದಿನಗಳ ಮುಕ್ತಾಯಕ್ಕೆ ಭಾರತದಲ್ಲಿ ಒಟ್ಟು ನೆಟ್ ಸಂಗ್ರಹ 238.85 ಕೋಟಿ ರೂಪಾಯಿ ತಲುಪಿದ್ದು, ಭಾರತದ ಒಟ್ಟು ಗ್ರಾಸ್ ಗಳಿಕೆ 285.20 ಕೋಟಿ ರೂಪಾಯಿ ಆಗಿದೆ.



