November 9, 2026
Monday, November 9, 2026
spot_img

ಪಟಾಕಿ ಹೊಡೆಯುವ ಮುನ್ನ ಪ್ರಾಣಿಗಳ ಬಗ್ಗೆ ದಯೆ ಇರಲಿ: ಸದ್ದಿಗೆ ಹೆದರಿ 14ನೇ ಮಹಡಿಯಿಂದ ಬಿದ್ದು ಶ್ವಾನ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸಬೇಕು ಸರ್ಕಾರ ಹೇಳಿದೆ. ಆದರೆ ನಿಯಮ ಮೀರಿ ಜನರು ಮಧ್ಯರಾತ್ರಿಯಾದರೂ ಪಟಾಕಿ ಹೊಡೆಯುತ್ತಿದ್ದಾರೆ. ಪಟಾಕಿಗಳ ಭಾರೀ ಶಬ್ದಕ್ಕೆ ಹೆದರಿದ ಬೀದಿ ನಾಯಿಯೊಂದು 14 ಅಂತಸ್ತಿನ ಕಟ್ಟಡದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕನ್ನಮಂಗಲದಲ್ಲಿ ನಡೆದಿದೆ.

ನಿರ್ಮಾಣ ಹಂತದಲ್ಲಿರುವ 14 ಅಂತಸ್ತಿನ ಕಟ್ಟಡದಲ್ಲಿ ಹೆಣ್ಣು ನಾಯಿಯೊಂದು ವಾಸವಾಗಿತ್ತು. ಅಲ್ಲಿನ ಭದ್ರತಾ ಸಿಬ್ಬಂದಿಯ ನೆರವಿನಿಂದ ಪ್ರಾಣಿ ಪ್ರಿಯರೊಬ್ಬರು ನಾಯಿಯನ್ನು ಆರೈಕೆ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಲಾಗಿತ್ತು. ನವೆಂಬರ್‌ 6ರ ಶುಕ್ರವಾರ ರಾತ್ರಿ ಪಟಾಕಿಗಳ ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ನಾಯಿ, ನಿದ್ರೆಯಲ್ಲಿದ್ದಾಗಲೇ ಕಟ್ಟಡದ ಮೇಲಿನಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಮಾತನಾಡಿರುವ ಸ್ಥಳೀಯ ಪ್ರಾಣಿ ಪ್ರಿಯರೊಬ್ಬರು, ನಾಯಿ ಇಷ್ಟು ದಿನ ಕಟ್ಟಡದಲ್ಲಿ ಸುರಕ್ಷಿತವಾಗಿಯೇ ಇತ್ತು. ಯಾವುದೇ ತೊಂದರೆಯಿಲ್ಲದೆ ವಾಸಿಸುತ್ತಿತ್ತು. ಆದರೆ, ಪಟಾಕಿಗಳ ಶಬ್ದಕ್ಕೆ ಹೆದರಿ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮನುಷ್ಯರಿಗಿಂತ ನಾಯಿಗಳಿಗೆ ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಸುಮಾರು ನಾಲ್ಕು ಪಟ್ಟು ಹೆಚ್ಚಿರುತ್ತದೆ. ಬ್ರಿಟನ್‌ನ ಪ್ರಾಣಿ ಹಿಂಸೆ ತಡೆಗಟ್ಟುವ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಮನುಷ್ಯರಿಗೆ ಸಾಮಾನ್ಯವೆನಿಸುವ ದೊಡ್ಡ ಶಬ್ದಗಳೂ ನಾಯಿಗಳಲ್ಲಿ ತೀವ್ರ ಭಯವನ್ನು ಉಂಟುಮಾಡಬಹುದು.

ಪಟಾಕಿಗಳ ಸ್ಫೋಟದ ಸದ್ದು ನಾಯಿಗಳಿಗೆ ಗ್ರೆನೇಡ್ ಸ್ಫೋಟದಂತೆ ಭಾಸವಾಗುತ್ತದೆ. ಇದರಿಂದ ಅವುಗಳಲ್ಲಿ ಭಯ, ಗೊಂದಲ, ಆತಂಕ, ಚಡಪಡಿಕೆ ಹಾಗೂ ಕೆಲವೊಮ್ಮೆ ಆಕ್ರಮಣಕಾರಿ ವರ್ತನೆ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಕಾನೂನುಬದ್ಧ ಪಟಾಕಿಗಳ ಶಬ್ದದ ಮಿತಿ 125 ಡೆಸಿಬಲ್‌ಗಳಷ್ಟಿದ್ದು, ಈ ಪ್ರಮಾಣದ ಶಬ್ದವೂ ಪ್ರಾಣಿಗಳಿಗೆ ತೀವ್ರ ತೊಂದರೆ ಉಂಟುಮಾಡಬಹುದು.

Must Read