ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಮಾಲಿನ್ಯ ನಿಯಂತ್ರಣದಲ್ಲಿ ವಿಶ್ವಕ್ಕೆ ಮಾದರಿಯಾಗುವ ಬದಲು, ವಾಯುಮಾಲಿನ್ಯದಲ್ಲೇ ‘ವಿಶ್ವಗುರು’ ಆಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಶುದ್ಧ ಗಾಳಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಸರ್ಕಾರ ನೀಡುವ ಸೌಲಭ್ಯವಲ್ಲ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
36 ಕೇಂದ್ರಗಳಲ್ಲಿ PM2.5 ಮಾಹಿತಿ ನಾಪತ್ತೆ?
ದೆಹಲಿಯ ವಾಯು ಗುಣಮಟ್ಟದ ಅಂಕಿಅಂಶಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಖರ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ವಾಯುಮಾಪನ ಕೇಂದ್ರಗಳ ಸುತ್ತ ನೀರು ಸಿಂಪಡಿಸಿ ಮಾಲಿನ್ಯದ ಪ್ರಮಾಣ ಕಡಿಮೆ ತೋರಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳಿದ್ದವು. ಈ ಬಾರಿ ಮಾಲಿನ್ಯ ಹೆಚ್ಚಿರುವ ಸಂದರ್ಭದಲ್ಲೇ ದೆಹಲಿಯ 59 ವಾಯು ಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ PM2.5 ಅಂಕಿಅಂಶಗಳು ಲಭ್ಯವಿಲ್ಲ ಎಂದು ಅವರು ದೂರಿದ್ದಾರೆ. 2019ರಲ್ಲೇ ವಾಯುಮಾಲಿನ್ಯ ಗಂಭೀರ ಸಮಸ್ಯೆ ಎಂದು ಗುರುತಿಸಿದ್ದರೂ ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ.
ಮಾಲಿನ್ಯದಿಂದ ಸಾವಿರಾರು ಸಾವು
ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನೂ ಖರ್ಗೆ ಪ್ರಸ್ತಾಪಿಸಿದ್ದಾರೆ. 2023ರಲ್ಲಿ ದೆಹಲಿಯಲ್ಲಿ ಕಣಮಾಲಿನ್ಯಕ್ಕೆ ಸಂಬಂಧಿಸಿದಂತೆ ಅಂದಾಜು 17,188 ಸಾವುಗಳು ಸಂಭವಿಸಿದ್ದು, ಒಟ್ಟು ಸಾವಿನ ಪ್ರಮಾಣದಲ್ಲಿ ಇದು ಶೇ.15ರಷ್ಟಿದೆ ಎಂದು ಉಲ್ಲೇಖಿಸಿದ್ದಾರೆ. 2021ರಲ್ಲಿ ಭಾರತದಲ್ಲಿ ಐದು ವರ್ಷದೊಳಗಿನ 1.69 ಲಕ್ಷಕ್ಕೂ ಹೆಚ್ಚು ಮಕ್ಕಳು ವಾಯುಮಾಲಿನ್ಯ ಸಂಬಂಧಿತ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂಬ ವರದಿಯನ್ನೂ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:
ಬಳಕೆಯಾಗದ ಮಾಲಿನ್ಯ ನಿಯಂತ್ರಣ ನಿಧಿ
2026ರ ಸೆಪ್ಟೆಂಬರ್ನ ಆರ್ಟಿಐ ಮಾಹಿತಿಯನ್ನು ಉಲ್ಲೇಖಿಸಿದ ಖರ್ಗೆ, ದೆಹಲಿಯ ಪರಿಸರ ಪರಿಹಾರ ನಿಧಿಯ 1,154 ಕೋಟಿ ಬಳಕೆಯಾಗದೆ ಉಳಿದಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅನುದಾನದಲ್ಲೂ ಕೇವಲ ಶೇ.17ರಷ್ಟು ಮಾತ್ರ ಬಳಕೆಯಾಗಿದೆ ಎಂದಿದ್ದಾರೆ.
ಪ್ರತಿ ವರ್ಷ ಭರವಸೆ ಮತ್ತು ಆರೋಪಗಳಲ್ಲೇ ಕಾಲ ಕಳೆಯದೆ, ಅನುದಾನ ಬಳಸಿಕೊಂಡು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಅವರು ವಾಯುಮಾಲಿನ್ಯದ ಬಗ್ಗೆ ದೇಶಕ್ಕೆ ಲೆಕ್ಕ ನೀಡುವ ಧೈರ್ಯ ತೋರಲಿ ಎಂದು ಸವಾಲು ಹಾಕಿದ್ದಾರೆ.



