ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಮ್ಮ ಮೆಟ್ರೋದ ವಿಜಯನಗರ ನಿಲ್ದಾಣದಲ್ಲಿ ರೈಲು ಹತ್ತಿರ ಬರುತ್ತಿದ್ದಂತೆ ವ್ಯಕ್ತಿಯೊಬ್ಬರು ಏಕಾಏಕಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮೆಟ್ರೋ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ವ್ಯಕ್ತಿಯ ಪ್ರಾಣ ಉಳಿಸಲಾಗಿದ್ದು, ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಮೆಟ್ರೋದ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.
ಸಿಬ್ಬಂದಿಯ ಸಮಯಪ್ರಜ್ಞೆ ಉಳಿದ ಜೀವ
ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ 1:41ರ ಸುಮಾರಿಗೆ ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ 45 ವರ್ಷದ ಜಾನ್ ಎಂಬುವವರು ಹಳಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಹಳಿಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ಸಿಬ್ಬಂದಿಯ ಈ ತಕ್ಷಣದ ಕ್ರಮದಿಂದಾಗಿ ವ್ಯಕ್ತಿಯ ಜೀವ ಉಳಿದಿದೆ.
ಖಿನ್ನತೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ?
ಹಳಿಯಿಂದ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾದ ಜಾನ್ ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯನಗರದ ನಿವಾಸಿಯಾಗಿರುವ ಜಾನ್ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಸುರಕ್ಷತಾ ಗೇಟ್ ಅಳವಡಿಕೆಗೆ ಹೆಚ್ಚಿದ ಒತ್ತಾಯ
ಮೆಟ್ರೋ ಹಳಿಗಳಿಗೆ ಪ್ರಯಾಣಿಕರು ಬೀಳುವುದನ್ನು ಹಾಗೂ ಇಂತಹ ಆತ್ಮಹತ್ಯೆ ಯತ್ನಗಳನ್ನು ಶಾಶ್ವತವಾಗಿ ತಡೆಯಲು ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ‘ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್’ (PSD) ಅಥವಾ ಸುರಕ್ಷತಾ ಗೇಟ್ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಪ್ರಯಾಣಿಕರ BMRCL ಅನ್ನು ಒತ್ತಾಯಿಸುತ್ತಿದ್ದಾರೆ. ಸದ್ಯ ದಟ್ಟಣೆ ನಿಯಂತ್ರಣಕ್ಕಾಗಿ ಮೆಟ್ರೋ ಕೇವಲ ಸ್ಟೀಲ್ ಬ್ಯಾರಿಕೇಡ್ಗಳನ್ನು ಮಾತ್ರ ಅಳವಡಿಸಿದೆ. ವರದಿಗಳ ಪ್ರಕಾರ, 2012 ರಿಂದ 2025 ರ ಅವಧಿಯಲ್ಲಿ ಮೆಟ್ರೋ ಹಳಿಗೆ ಇಳಿದ ಒಟ್ಟು 59 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 16 ಆತ್ಮಹತ್ಯೆ ಪ್ರಕರಣಗಳಾಗಿವೆ ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.



