ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬೆ ದೇವಿಯ ದರುಶನೋತ್ಸವದ ಕೊನೆಯ ದಿನ ಭಕ್ತರ ದಂಡೇ ದೇವಸ್ಥಾನದತ್ತ ಹರಿದುಬಂದಿದೆ. ಸಾವಿರಾರು ಭಕ್ತರು ದರುಶನಕ್ಕಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಭಕ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಿಗದಿತ ಸಮಯವನ್ನು ವಿಸ್ತರಿಸಿ, ನಾಳೆ ಬೆಳಗಿನ ಜಾವ 4 ಗಂಟೆಯವರೆಗೂ ದೇವಿಯ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರಿಗಾಗಿ ಹೆಚ್ಚುವರಿ ಸಮಯ
ದರುಶನದ ಕೊನೆಯ ದಿನವಾದ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರೂ ದೇವಿಯ ದರುಶನ ಪಡೆಯದೆ ವಾಪಸ್ ತೆರಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಾತ್ರಿ 8ರಿಂದ 10 ಗಂಟೆಯವರೆಗೆ ದೇವಿಗೆ ನೈವೇದ್ಯ ಪೂಜೆ ನಡೆಯಲಿದ್ದು, ಬಳಿಕ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ನಿರಂತರವಾಗಿ ದರುಶನ ವ್ಯವಸ್ಥೆ ಇರಲಿದೆ.
ಇದನ್ನೂ ಓದಿ:
ದೀಪಾವಳಿ ಹಬ್ಬದ ಸಂಭ್ರಮ ಮುಗಿಸಿ ದೇವಿಯ ದರುಶನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಿರಿಯರಿಗೆ ಎಡೆ ಇಟ್ಟು ನಂತರ ದೇವಿಯ ದರುಶನ ಪಡೆಯಲು ಬರುವ ಭಕ್ತರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮಯ ವಿಸ್ತರಿಸಲಾಗಿದೆ. ಭಕ್ತರು ಆತಂಕಪಡದೆ ಆಗಮಿಸಿ ಸುಗಮವಾಗಿ ದರುಶನ ಪಡೆದು ತೆರಳಬಹುದು ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
ಪ್ರೊಟೋಕಾಲ್ ವ್ಯವಸ್ಥೆ ವಿರುದ್ಧ ಆಕ್ರೋಶ
ಇನ್ನೊಂದೆಡೆ, ದರುಶನೋತ್ಸವದ ಕೊನೆಯ ದಿನ ದೇವಸ್ಥಾನದಲ್ಲಿ ಪ್ರೊಟೋಕಾಲ್ ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುತ್ತಿದ್ದರೆ, ಕೆಲವರು ಶಿಷ್ಟಾಚಾರದ ವಾಹನಗಳ ಮೂಲಕ ದೇವಾಲಯದ ಸಮೀಪಕ್ಕೆ ಆಗಮಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಗೆ ಗುಂಪು ಗುಂಪಾಗಿ ಪ್ರೊಟೋಕಾಲ್ ಸೌಲಭ್ಯ ನೀಡಲಾಗುತ್ತಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಇದರಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.



