ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯುವ ವಿಷಯಕ್ಕೆ ಆರಂಭವಾದ ಸಣ್ಣ ಜಗಳದಲ್ಲಿ ರಾಷ್ಟ್ರಪತಿ ಭವನದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುವ ಯೋಧ ಸೌರಭ್ ತೋಮರ್ ಅವರ ತಲೆಗೆ ಗುಂಡು ತಗುಲಿದೆ.
ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರಪತಿಯವರ ಅಂಗರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಸೌರಭ್, ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ರಜೆ ಪಡೆದು ತಮ್ಮೂರಾದ ಗೋಪಾಲ್‌ಪುರ ಖದಾನ ಗ್ರಾಮಕ್ಕೆ ಬಂದಿದ್ದರು. ಸೌರಭ್ ಹಾಗೂ ಅವರ ಸಹೋದರರಾದ ವಿನೀತ್ ಮತ್ತು ಮಿಂಟು ಜೊತೆ ಮನೆಯ ಹೊರಗೆ ಪಟಾಕಿ ಹೊಡೆಯುತ್ತಿದ್ದರು.
ಈ ವೇಳೆ ಗ್ರಾಮದವರಾದ ಧೀರಜ್ ಹಾಗೂ ಆತನ ಸಹೋದರ ಮೋನು ಎನ್ನುವವರು ಪಟಾಕಿ ಹೊಡೆಯಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎರಡು ಕುಟುಂಬಗಳ ನಡುವೆ ಮೊದಲಿನಿಂದಲೂ ವೈಮನಸ್ಸು ಇತ್ತು ಎಂದು ಹೇಳಲಾಗಿದೆ. ಪಟಾಕಿ ವಿಚಾರವಾಗಿ ಸುಮ್ಮನೆ ಕ್ಯಾತೆ ತೆಗೆದ ಧೀರಜ್ ಹಾಗೂ ಮೋನು ಮಾತಿನ ಚಕಮಕಿ ನಂತರ ಗನ್ ತೆಗೆದಿದ್ದಾರೆ. ದೇಸೀ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಗೋಡೆಗೆ ತಗುಲಿ ತದನಂತರ ಸೌರಭ್ ಕಿವಿಯ ಹಿಂಭಾಗಕ್ಕೆ ತಗುಲಿದೆ. ಇದರಿಂದ ಸೌರಭ್ ಕುಸಿದು ಬಿದ್ದಿದ್ದಾರೆ. ತದನಂತರ ಮೋನು ವಿನೀತ್ ತಲೆಗೂ ಕೋಲಿನಲ್ಲಿ ಹೊಡೆದು ಓಡಿಹೋಗಿದ್ದಾನೆ.
ಸೌರಭ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಂತರ ಬುಲೆಟ್ ಹೊರಕ್ಕೆ ತೆಗೆಯಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಸೌರಭ್ ತಂದೆ ಜನಕರಾಜ್ ದೂರು ನೀಡಿದ್ದು, ಧೀರಜ್ ಹಾಗೂ ಮೋನು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನೂ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಲ್ಲ.



