ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರುಶನೋತ್ಸವ ಈ ಬಾರಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ 11 ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರುಶನ ಪಡೆದು ಪುನೀತರಾಗಿದ್ದಾರೆ.
ಕೊನೆಯ ದಿನವೂ ಭಕ್ತರ ದಂಡು
ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗಿನ ಜಾವ 6 ಗಂಟೆಯವರೆಗೆ ನಿರಂತರವಾಗಿ ಭಕ್ತರಿಗೆ ದರುಶನದ ಅವಕಾಶ ಕಲ್ಪಿಸಲಾಗಿತ್ತು. ಕೊನೆಯ ದಿನವಾದ ಇಂದು ಬೆಳಗ್ಗೆಯೂ ಭಕ್ತರ ಸರದಿ ಮುಂದುವರಿದಿತ್ತು. ದೇವಿಯ ದರುಶನ ಪಡೆಯಲು ದೂರದ ಊರುಗಳಿಂದಲೂ ಜನರು ಆಗಮಿಸಿದ್ದರು.
ಇದನ್ನೂ ಓದಿ:
25.36 ಕೋಟಿ ರೂ. ಆದಾಯ ಸಂಗ್ರಹ
ಈ ವರ್ಷದ ಜಾತ್ರಾ ಮಹೋತ್ಸವವು ಭಕ್ತರ ಸಂಖ್ಯೆಯಷ್ಟೇ ಅಲ್ಲದೆ ಆದಾಯದ ದೃಷ್ಟಿಯಿಂದಲೂ ಗಮನ ಸೆಳೆದಿದೆ. 1,000 ರೂ. ಮತ್ತು 300 ರೂ. ವಿಶೇಷ ದರುಶನದ ಟಿಕೆಟ್‌ಗಳ ಮಾರಾಟ ಹಾಗೂ ಲಾಡು ಪ್ರಸಾದದ ವಿತರಣೆಯಿಂದ ಒಟ್ಟು 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಈ ಮೂಲಕ ಹಾಸನಾಂಬೆ ಉತ್ಸವ ಹೊಸ ದಾಖಲೆ ಬರೆದಿದೆ.
ಕೆಂಡೋತ್ಸವದ ಸಂಭ್ರಮ
ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ದೇವಾಲಯದ ಗರ್ಭಗುಡಿಯ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದ್ದು, ಜೊತೆಗೆ ಸಿದ್ದೇಶ್ವರಸ್ವಾಮಿ ಕೆಂಡೋತ್ಸವವೂ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದಾರೆ.



