November 11, 2026
Wednesday, November 11, 2026
spot_img

ಗ್ರಾಹಕರ ಜೇಬಿಗೆ ಹೊರೆ: ಮದರ್ ಡೈರಿ ಹಾಲಿನ ದರ ಏರಿಕೆ; ನಾಳೆಯಿಂದಲೇ ಹೊಸ ಬೆಲೆ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಹಾಲು ಖರೀದಿಸುವ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರಮುಖ ಹಾಲು ಮಾರಾಟ ಸಂಸ್ಥೆ ಮದರ್ ಡೈರಿ ತನ್ನ ವಿವಿಧ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2ರಿಂದ 4 ರೂ.ವರೆಗೆ ಹೆಚ್ಚಿಸಿದೆ.

ನವೆಂಬರ್ 12ರ ಗುರುವಾರದಿಂದಲೇ ಹೊಸ ದರಗಳು ಜಾರಿಗೆ ಬರಲಿದ್ದು, ದೆಹಲಿ-ಎನ್‌ಸಿಆರ್ ಸೇರಿದಂತೆ ಸಂಸ್ಥೆಯ ಉತ್ಪನ್ನಗಳು ಲಭ್ಯವಿರುವ ಮಾರುಕಟ್ಟೆಗಳ ಗ್ರಾಹಕರ ಮೇಲೆ ಇದರ ಪರಿಣಾಮ ಬೀರಲಿದೆ ಎಂದು ಪಿಟಿಐ ವರದಿ ಮಾಡಿದೆ.

1974ರಲ್ಲಿ ಸ್ಥಾಪನೆಯಾದ ಮದರ್ ಡೈರಿ, ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಸಂಪೂರ್ಣ ಸ್ವಾಮ್ಯದ ಸಂಸ್ಥೆಯಾಗಿದೆ. ಈ ವರ್ಷದಲ್ಲಿ ಕಂಪನಿ ಎರಡನೇ ಬಾರಿಗೆ ಹಾಲಿನ ದರ ಪರಿಷ್ಕರಣೆ ಮಾಡಿದೆ. ಇದಕ್ಕೂ ಮೊದಲು ಮೇ 14ರಂದು ಬೆಲೆ ಹೆಚ್ಚಿಸಲಾಗಿತ್ತು.

ಯಾವ ಹಾಲಿನ ಬೆಲೆ ಎಷ್ಟಕ್ಕೆ ಏರಿಕೆ?

ಹೊಸ ದರದ ಪ್ರಕಾರ, ಲೀಟರ್‌ಗೆ 72 ರೂ. ಇದ್ದ ಫುಲ್ ಕ್ರೀಮ್ ಹಾಲು 76 ರೂ.ಗೆ ತಲುಪಿದೆ. ಪೌಚ್‌ನಲ್ಲಿ ದೊರೆಯುವ ಟೋನ್ಡ್ ಹಾಲಿನ ಬೆಲೆ 60ರಿಂದ 62 ರೂ.ಗೆ ಏರಿಕೆಯಾಗಿದೆ. ಡಬಲ್ ಟೋನ್ಡ್ ಹಾಲು 54ರಿಂದ 56 ರೂ.ಗೆ ಹೆಚ್ಚಳವಾಗಿದ್ದರೆ, ಹಸುವಿನ ಹಾಲಿನ ದರ 62ರಿಂದ 65 ರೂ.ಗೆ ಏರಿಕೆಯಾಗಿದೆ. ವಿತರಣಾ ಕೇಂದ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾರಾಟವಾಗುವ ಟೋನ್ಡ್ ಹಾಲಿನ ಬೆಲೆಯೂ 58ರಿಂದ 60 ರೂ.ಗೆ ಹೆಚ್ಚಾಗಿದೆ.

ಇದನ್ನೂ ಓದಿ:

ಬೆಲೆ ಏರಿಕೆಗೆ ಕಾರಣವೇನು?

ರೈತರಿಂದ ಹಾಲು ಖರೀದಿಸುವ ದರ ಹೆಚ್ಚಾಗಿರುವುದರಿಂದ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ. ಈ ಹೆಚ್ಚುವರಿ ಹೊರೆಯ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Must Read

Skip to toolbar