November 11, 2026
Wednesday, November 11, 2026
spot_img

ಮೆಟ್ರೋ ಕನಸಿಗೆ ಮತ್ತೊಂದು ವೇಗ: ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂವರೆಗೆ ಬ್ಲೂ ಲೈನ್ ಟ್ರಯಲ್ ರನ್ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿರುವ ನಮ್ಮ ಮೆಟ್ರೋದ ಬ್ಲೂ ಲೈನ್ ಕಾಮಗಾರಿ ಮತ್ತೊಂದು ಮಹತ್ವದ ಹಂತ ತಲುಪಿದೆ.

ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂ ಹಾಗೂ ದೊಡ್ಡನೆಕ್ಕುಂದಿ ಮಾರ್ಗವಾಗಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಮುಂದುವರಿದಿದೆ. ಈ ಮೂಲಕ ಮುಖ್ಯ ಮಾರ್ಗದ ಪರೀಕ್ಷಾ ಸಂಚಾರಕ್ಕೆ ಯೋಜನೆ ಹತ್ತಿರವಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಶುಭಾಶಯ ಸಂದೇಶ ನೀಡಿರುವ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಯೋಜನೆಯ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬ್ಲೂ ಲೈನ್ ಅನ್ನು ಆದಷ್ಟು ಬೇಗ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಮಾರ್ಗ

ಒಟ್ಟು 58.19 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಅನ್ನು ಔಟರ್ ರಿಂಗ್ ರೋಡ್-ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್ ಎಂದೂ ಕರೆಯಲಾಗುತ್ತದೆ. ಇದು ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ.

ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗೆ 19.75 ಕಿ.ಮೀ. ಮಾರ್ಗ ನಿರ್ಮಾಣವಾಗುತ್ತಿದೆ. ಎರಡನೇ ಹಂತದಲ್ಲಿ ಕೆ.ಆರ್. ಪುರಂನಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ. ಸಂಪರ್ಕ ಕಲ್ಪಿಸಲಾಗುತ್ತದೆ.

ನವೆಂಬರ್ 13ಕ್ಕೆ ಪಿಂಕ್ ಲೈನ್ ಉದ್ಘಾಟನೆ

ಇನ್ನೊಂದೆಡೆ, ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಪಿಂಕ್ ಲೈನ್‌ನ 7.5 ಕಿ.ಮೀ. ಎತ್ತರಿಸಿದ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಈ ಮಾರ್ಗ ಆರಂಭವಾದ ಬಳಿಕ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

Must Read