ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ ಹೊಸ ಮೈತ್ರಿಯೊಂದು ಅಸ್ತಿತ್ವಕ್ಕೆ ಬಂದಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಅಧ್ಯಕ್ಷ, ಸಂಸದ ಚಂದ್ರಶೇಖರ್ ಆಜಾದ್ ಕೈಜೋಡಿಸಿ ‘ಸಾಮಾಜಿಕ ಪರಿವರ್ತನ್ ಮೋರ್ಚಾ’ ಎಂಬ ಹೊಸ ರಾಜಕೀಯ ಒಕ್ಕೂಟವನ್ನು ಘೋಷಿಸಿದ್ದಾರೆ.
ಈ ಮೈತ್ರಿಯು ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದೆ.
ಲಖನೌನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿಯ ಘೋಷಣೆ ಮಾಡಿದ ಓವೈಸಿ, ಚಂದ್ರಶೇಖರ್ ಆಜಾದ್ ಅವರನ್ನು ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಹೊಸ ರಾಜಕೀಯ ಸಮೀಕರಣ ರೂಪಿಸುವ ಪ್ರಯತ್ನಕ್ಕೆ ಎರಡೂ ಪಕ್ಷಗಳು ಚಾಲನೆ ನೀಡಿವೆ.
ಸಾಮಾಜಿಕ ನ್ಯಾಯವೇ ಮೈತ್ರಿಯ ಪ್ರಮುಖ ಗುರಿ
ಹಿಂದುಳಿದ ವರ್ಗಗಳು, ದಲಿತರು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಹಲವು ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕ್‌ಗಳಾಗಿ ಬಳಸಿಕೊಂಡಿವೆ ಎಂದು ಓವೈಸಿ ಆರೋಪಿಸಿದರು. ಶಿಕ್ಷಣದ ಗುಣಮಟ್ಟ, ಯುವಜನರ ನಿರುದ್ಯೋಗ, ರೈತರ ಸಂಕಷ್ಟ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕೆ ತಮ್ಮ ಮೈತ್ರಿ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದರು. ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಬಾರಿ ಅಧಿಕಾರ ಸಿಗುವುದನ್ನು ತಡೆಯುವುದು ಕೂಡ ತಮ್ಮ ರಾಜಕೀಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
ಇತರ ಪಕ್ಷಗಳಿಗೂ ಆಹ್ವಾನ
ಇದೇ ವೇಳೆ ಮಾತನಾಡಿದ ಚಂದ್ರಶೇಖರ್ ಆಜಾದ್, ಬಿಜೆಪಿಯನ್ನು ಎದುರಿಸುವ ಉದ್ದೇಶ ಹೊಂದಿರುವ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳೂ ತಮ್ಮ ಮೈತ್ರಿಕೂಟದೊಂದಿಗೆ ಕೈಜೋಡಿಸಬಹುದು ಎಂದು ಆಹ್ವಾನ ನೀಡಿದರು. ಜನರ ಹಕ್ಕುಗಳು ಮತ್ತು ಸಾಮಾಜಿಕ ಬದಲಾವಣೆಯ ಆಶಯಗಳನ್ನು ಈಡೇರಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಉಭಯ ನಾಯಕರು ಭರವಸೆ ನೀಡಿದರು.



