ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಚರ್ಚೆಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ವಾಹನಗಳ ಮೈಲೇಜ್ ಕುಸಿತಕ್ಕೆ ಎಥೆನಾಲ್ ಕಾರಣವಲ್ಲ, ಬೆಂಗಳೂರಿನ ಹದಗೆಟ್ಟ ರಸ್ತೆಗಳು ಮತ್ತು ರಸ್ತೆಗುಂಡಿಗಳೇ ಪ್ರಮುಖ ಕಾರಣ ಎಂದು ಅವರು ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಎಥೆನಾಲ್ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
18ರಿಂದ 11 ಕಿ.ಮೀಗೆ ಇಳಿದ ಮೈಲೇಜ್
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ವಾಹನಗಳು ಸರಾಸರಿ 18 ಕಿಲೋಮೀಟರ್ ಮೈಲೇಜ್ ನೀಡುತ್ತಿದ್ದವು. ಆದರೆ ಈಗ ರಸ್ತೆಗುಂಡಿಗಳಿಂದಾಗಿ ಅದು ಸುಮಾರು 11 ಕಿಲೋಮೀಟರ್ಗೆ ಇಳಿದಿದೆ ಎಂದು ಅಶೋಕ್ ಹೇಳಿದ್ದಾರೆ. ವಾಹನಗಳ ಇಂಧನ ದಕ್ಷತೆ ಕುಸಿತಕ್ಕೆ ರಸ್ತೆ ಸ್ಥಿತಿಯೂ ಕಾರಣವಾಗಬಹುದು ಎಂಬುದನ್ನು ಪ್ರಸ್ತಾಪಿಸಿದ ಅವರು, ಎಥೆನಾಲ್ ಮಿಶ್ರಣದ ವಿರುದ್ಧದ ಆರೋಪಗಳನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಥೆನಾಲ್ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ. ಎಥೆನಾಲ್ ಪರಿಸರ ಸ್ನೇಹಿ ಹಾಗೂ ರೈತರಿಗೆ ಅನುಕೂಲಕರವಾಗಿದ್ದು, ರಾಜಕೀಯ ಕಾರಣಗಳಿಂದ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ದೂರಿದ್ದಾರೆ.
ಎಥೆನಾಲ್ ಮಿಶ್ರಣದಿಂದ ರೈತರಿಗೆ ಸುಮಾರು 1.60 ಲಕ್ಷ ಕೋಟಿ ರೂಪಾಯಿ ನೆರವು ದೊರೆತಿದೆ ಹಾಗೂ ದೇಶದಲ್ಲಿ ಕಚ್ಚಾ ತೈಲ ಬಳಕೆ 350 ಟನ್ನಷ್ಟು ಕಡಿಮೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:
ಪರೀಕ್ಷಾ ನಿಯಮ ಉಲ್ಲಂಘನೆ ಆರೋಪ
ಎಥೆನಾಲ್ ಪರೀಕ್ಷೆ ವೇಳೆ ರಾಜ್ಯ ಸರ್ಕಾರ ನಿಗದಿತ ನಿಯಮಗಳನ್ನು ಪಾಲಿಸಿಲ್ಲ ಎಂದೂ ಅಶೋಕ್ ಆರೋಪಿಸಿದ್ದಾರೆ. ಒಂದು ಲೀಟರ್ ಇಂಧನದಿಂದ ಆರು ಮಾದರಿಗಳನ್ನು ಸಂಗ್ರಹಿಸಿ, ಪೆಟ್ರೋಲ್ ಬಂಕ್ ಮಾಲೀಕರು, ತೈಲ ಕಂಪನಿ ಮತ್ತು ಪ್ರಯೋಗಾಲಯ ಸೇರಿದಂತೆ ಸಂಬಂಧಪಟ್ಟವರಿಗೆ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಸವಾಲು
ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯಕ್ಕೆ ಸುಮಾರು 10 ಸಾವಿರ ಕೋಟಿ ರೂಪಾಯಿ ಅನುದಾನ ಬಂದಿದೆ ಎಂದು ಹೇಳಿದ ಅಶೋಕ್, ಎಥೆನಾಲ್ ಬೇಡವೆಂದಾದರೆ ಆ ಹಣವನ್ನು ಕೇಂದ್ರಕ್ಕೆ ಹಿಂದಿರುಗಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.



