November 14, 2026
Saturday, November 14, 2026
spot_img

ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣ: ಹಿರಿಯ ಆಟಗಾರರ ವಿರುದ್ಧ ಗಂಭೀರ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಕೇವಲ 89 ರನ್‌ಗಳಿಗೆ ಆಲೌಟ್ ಆಗುವ ಮೂಲಕ 244 ರನ್‌ಗಳ ಭಾರಿ ಸೋಲು ಕಂಡಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ಭಾರತಕ್ಕೆ ಇದು ಎರಡನೇ ಅತಿ ದೊಡ್ಡ ಸೋಲಾಗಿದೆ. ಈ ಹೀನಾಯ ಪ್ರದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ತಂಡದ ಬ್ಯಾಟಿಂಗ್ ವೈಫಲ್ಯದ ವಿರುದ್ಧ ಯಾವುದೇ ಮುಚ್ಚುಮರೆಯಿಲ್ಲದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿವೀಸ್ ವೇಗಿ ಮ್ಯಾಟ್ ಹೆನ್ರಿ (6/27) ತಮ್ಮ ಮಾರಕ ದಾಳಿಯಿಂದ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಭಾರತಕ್ಕೆ ದೊಡ್ಡ ಆಘಾತ ನೀಡಿದರು. ಇದರ ಬಗ್ಗೆ ಮಾತನಾಡಿದ ಗಂಭೀರ್, “ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳು ಎಂಬುದೇ ಇರುವುದಿಲ್ಲ. ಮ್ಯಾಟ್ ಹೆನ್ರಿ ಉತ್ತಮ ಜಾಗದಲ್ಲಿ ಬೌಲಿಂಗ್ ಮಾಡಿದರು ನಿಜ, ಆದರೆ ಅದನ್ನು ಸಮರ್ಥವಾಗಿ ಎದುರಿಸುವ ಕಲೆ ನಮಗೆ ತಿಳಿದಿರಬೇಕು” ಎಂದು ಹಿರಿಯ ಆಟಗಾರರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ನ್ಯೂಝೀಲೆಂಡ್ ಪಿಚ್‌ಗಳ ಸ್ವಭಾವದ ಬಗ್ಗೆ ವಿವರಿಸಿದ ಗಂಭೀರ್, ಭಾರತದಲ್ಲಿ ಮೊದಲ 10-15 ಓವರ್‌ಗಳು ಬ್ಯಾಟಿಂಗ್‌ಗೆ ಸುಲಭವಾಗಿದ್ದರೆ, ಇಲ್ಲಿ ಅದು ಅತ್ಯಂತ ಕಠಿಣವಾಗಿರುತ್ತದೆ ಎಂದರು. ಇಂತಹ ಪಿಚ್‌ಗಳಲ್ಲಿ ಆರಂಭದಲ್ಲೇ 70-80 ರನ್ ಗಳಿಸುವ ಅಗತ್ಯವಿಲ್ಲ. ಬದಲಿಗೆ ವಿಕೆಟ್ ನಷ್ಟವಿಲ್ಲದೆ 35-40 ರನ್ ಗಳಿಸಿದರೂ ಸಾಕು. ಅನುಭವಿ ಆಟಗಾರರು ಈ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಫೀಲ್ಡಿಂಗ್ ವೈಫಲ್ಯದಿಂದಾಗಿ ಕಿವೀಸ್ ತಂಡವು 333 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು ಎಂದರು.

ಸತತ ಬ್ಯಾಟಿಂಗ್ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಗಂಭೀರ್, ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲೂ ಇದೇ ರೀತಿಯ ಪಿಚ್‌ಗಳು ಸಿಗಲಿವೆ ಎಂದು ನೆನಪಿಸಿದರು. ವಿಶ್ವಕಪ್ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬ್ಯಾಟರ್‌ಗಳು ಕೇವಲ 26-27 ಓವರ್‌ಗಳಲ್ಲೇ 90 ರನ್‌ಗಳಿಗೆ ಆಲೌಟ್ ಆಗುತ್ತಿರುವುದು ದೊಡ್ಡ ಚಿಂತೆಯ ವಿಷಯ ಎಂ9ದರು.

ಯುವ ಬೌಲರ್‌ಗಳನ್ನು ಸಮರ್ಥಿಸಿಕೊಂಡ ಗಂಭೀರ್, ವಿದೇಶಿ ಪಿಚ್‌ಗಳಲ್ಲಿ ಸಿಗುವ ಸೀಮಿತ ಅವಕಾಶಗಳಲ್ಲೇ ಆಟಗಾರರು ಲಯ ಕಂಡುಕೊಳ್ಳಬೇಕು ಎಂದರು. ಕೊನೆಯಲ್ಲಿ ಮಾತನಾಡುತ್ತಾ, “ಸೋತಾಗ ಖಂಡಿತವಾಗಿಯೂ ನೋವಾಗುತ್ತದೆ, ಆ ನೋವು ಇರಬೇಕು. ಅದೇ ನಮ್ಮನ್ನು ಮುಂದಿನ ಪಂದ್ಯಗಳಿಗೆ ಇನ್ನಷ್ಟು ಬಲಿಷ್ಠಗೊಳಿಸುತ್ತದೆ” ಎಂದು ಹೇಳುವ ಮೂಲಕ, ಭಾನುವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದರು.

Must Read

Skip to toolbar