ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ತಾರಾಲಯವನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ನಿನ್ನೆ ಮೈಸೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಈ ವೇಳೆ ಅವರ ಬೆಂಗಾವಲು ಪಡೆಯ ಸೇನಾ ಹೆಲಿಕಾಪ್ಟರ್ ಒಂದರಲ್ಲಿ ತಾಂತ್ರಿಕ ದೋಷ ಕಾಣಿಸಿದ್ದು, ಹೆಲಕಾಪ್ಟರ್ ಮೈಸೂರಿನಲ್ಲಿಯೇ ಉಳಿದುಕೊಂಡಿದೆ.
ಬೆಂಗಳೂರಿನಲ್ಲಿ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಆಗಮಿಸಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಹಲವು ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ತದನಂತರ ಮೋದಿ ಅವರ ಬೆಂಗಾವಲು ಪಡೆಯ ಸೇನಾ ಹೆಲಿಕಾಪ್ಟರ್ ಒಂದರಲ್ಲಿ ತಾಂತ್ರಿಕ ದೋಷ ಇರುವುದು ಗೊತ್ತಾಗಿದೆ. ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ನಿಂತಿದ್ದು, ಭಾರತೀಯ ವಾಯುಸೇನೆ (ಐಎಎಫ್) ಸಿಬ್ಬಂದಿಗಳು ಅದರ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಧಾನಿ ಮೋದಿ ಮಧ್ಯಾಹ್ನ 3:20ರ ಸುಮಾರಿಗೆ ಮೈಸೂರಿಗೆ ಬಂದಿಳಿದಿದ್ದರು. ಮೂರು ಸೇನಾ ಹೆಲಿಕಾಪ್ಟರ್ಗಳಲ್ಲಿ ಅವರು ಆಗಮಿಸಿದ್ದು, ಅದರಲ್ಲಿ ಎರಡು ಬೆಂಗಾವಲು ಹೆಲಿಕಾಪ್ಟರ್ಗಳಾಗಿದ್ದವು. ಪ್ರಧಾನಿ ಅವರ ಕಾರ್ಯಕ್ರಮಗಳು ಮುಗಿದ ನಂತರ, ಎರಡು ಹೆಲಿಕಾಪ್ಟರ್ಗಳು ಹಾರಾಟ ನಡೆಸಿದವು. ಆದರೆ, ಒಂದು ಬೆಂಗಾವಲು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆಗಲು ಸಾಧ್ಯವಾಗಲಿಲ್ಲ. ವಾಯುಸೇನೆ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಉಳಿದ ಎರಡು ಹೆಲಿಕಾಪ್ಟರ್ಗಳನ್ನು ಕಳುಹಿಸಿ, ದೋಷಪೂರಿತ ಹೆಲಿಕಾಪ್ಟರನ್ನು ಹೆಲಿಪ್ಯಾಡ್ನಲ್ಲೇ ನಿಲ್ಲಿಸಿದರು. ಸ್ಥಳದಲ್ಲಿ ಸ್ಥಳೀಯ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ.



