November 14, 2026
Saturday, November 14, 2026
spot_img

ಏಕಕಾಲಕ್ಕೆ ಬರೋಬ್ಬರಿ ಹತ್ತು ಸಾವಿರ ವಿಮಾನ ಹಾರಾಟ ಸ್ಥಗಿತ: ಏನಾಗ್ತಿದೆ ಅಮೆರಿಕದಲ್ಲಿ ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕಾದಲ್ಲಿ ಒಂದೇ ಸಮಯದಕ್ಕೆ ಬರೋಬ್ಬರಿ ಹತ್ತು ಸಾವಿರದಷ್ಟು ವಿಮಾನಹಾರಾಟ ಸ್ಥಗಿತವಾಗಿದೆ. ಇದರ ಜೊತೆಗೆ ಬರೋಬ್ಬರಿ 4,700ಕ್ಕೂ ಹೆಚ್ಚು ವಿಮಾನಗಳು ಕ್ಯಾನ್ಸಲ್‌ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಅಮೆರಿಕದ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಸಾವಿರಾರು ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಉಂಟಾಗಿತ್ತು. ಇತ್ತ ವಿಮಾನ ನಿಲ್ದಾಣದಲ್ಲಿ ತಾವು ಪ್ರಯಾಣಿಸುವ ಫ್ಲೈಟ್‌ನ ಬಗ್ಗೆ ಯಾವುದಾದರೂ ಮಾಹಿತಿ ಸಿಗಲಿದೆಯಾ ಎಂದು ಪ್ರಯಾಣಿಕರು ಕಾದು ಕುಳಿತಿದ್ದರು.

ಇದೀಗ ವಿಮಾನ ಹಾರಾಟಕ್ಕೆ ಸಂಬಂಧಿಸಿದ ನಿರ್ಬಂಧವನ್ನು ತೆಗೆಯಲಾಗಿದೆ. ಅದಾಗ್ಯೂ ವಿಮಾನಯಾನ ಸೇವೆಗಳು ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸ್ವಿಚ್‌ಗಳು ಮತ್ತು ರೂಟರ್‌ಗಳು ಅತಿಯಾದ ಡೇಟಾ ಒತ್ತಡದಿಂದ ಓವರ್‌ಲೋಡ್ ಆಗಿದ್ದವು. ಇದರಿಂದ ತಪ್ಪಾದ ಹಾಗೂ ಅಸಮಂಜಸ ಮಾಹಿತಿಗಳು ರವಾನೆಯಾಗಿದ್ದು, ಸಂವಹನ ಮತ್ತು ರಾಡಾರ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದಾದ್ಯಂತ ಇರುವ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿತ್ತು ಎನ್ನಲಾಗಿದೆ.

ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಡುವೆ ಸರಿಯಾದ ಸಂವಹನ ಸಾಧ್ಯವಾಗದಿದ್ದರೆ ವಿಮಾನಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ FAA ವಿಮಾನಗಳ ಟೇಕ್‌ಆಫ್‌ಗೆ ತಡೆ ನೀಡಿತ್ತು. ಆದರೆ ಈಗಾಗಲೇ ಆಕಾಶದಲ್ಲಿದ್ದ ವಿಮಾನಗಳಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಲು ಅವಕಾಶ ನೀಡಲಾಗಿತ್ತು. ಇದರ ಜೊತೆಗೆ ಈ ತಾಂತ್ರಿಕ ಸಮಸ್ಯೆಯ ಹಿಂದೆ ಸೈಬರ್‌ ದಾಳಿ ಅಥವಾ ಎಐ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

Must Read