November 14, 2026
Saturday, November 14, 2026
spot_img

ಪಾಕ್ ವಿರುದ್ಧ ರೋಚಕ ಗೆಲುವು: 9ನೇ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಕಿರಿಯರ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಎಸೆತದವರೆಗೂ ರೋಚಕತೆಯ ರಸದೌತಣ ನೀಡಿದೆ.

ಅಸಾಧ್ಯವೆನಿಸಿದ್ದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ತನ್ನ 9ನೇ ಅಂಡರ್-19 ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

50 ಓವರ್‌ಗಳಲ್ಲಿ 337 ರನ್

ಒಮಾನ್‌ನ ಅಲ್ ಅಮೆರಾತ್‌ನ ಮಿನಿಸ್ಟ್ರಿ ಟರ್ಫ್-2 ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 337 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 217 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಕೊನೆಯ ಹಂತದಲ್ಲಿ ಮನಾಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಇದನ್ನೂ ಓದಿ:

ಪಾಕಿಸ್ತಾನದ ಪರ ಉಸ್ಮಾನ್ ಖಾನ್ 111 ಎಸೆತಗಳಲ್ಲಿ 107 ರನ್ ಸಿಡಿಸಿ ಶತಕ ದಾಖಲಿಸಿದರು. ಅಬ್ದುಲ್ ಖಾದಿರ್ 54 ಎಸೆತಗಳಲ್ಲಿ 80 ರನ್ ಚಚ್ಚಿದರೆ, ನಾಯಕ ಫರ್ಹಾನ್ ಯೂಸುಫ್ 63 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು. ಭಾರತದ ಪರ ಕಾವ್ಯಾ ಪಟೇಲ್ 4 ವಿಕೆಟ್ ಕಬಳಿಸಿದರೆ, ಚಿಗುರುಪತಿ ವೆಂಕಟ 3 ವಿಕೆಟ್ ಪಡೆದರು.

ಕೊನೆಯ ಕ್ಷಣದಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಮೋಹಿತ್

217 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮನಾಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಆಸರೆಯಾದರು. ಒಂಬತ್ತನೇ ವಿಕೆಟ್‌ಗೆ ಮಹತ್ವದ ಜೊತೆಯಾಟವಾಡಿದ ಈ ಜೋಡಿ ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿತು. ಮನಾಲ್ 47 ರನ್ ಗಳಿಸಿ ಔಟಾದರೂ ಮೋಹಿತ್ ಹೋರಾಟ ನಿಲ್ಲಿಸಲಿಲ್ಲ.

ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 8 ರನ್‌ಗಳ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿದ್ದಾಗ ಮೋಹಿತ್ ಬೌಂಡರಿ ಬಾರಿಸಿ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೋಹಿತ್ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಗೆಲುವಿನ ರೂವಾರಿಯಾದರು.

Must Read

Skip to toolbar