November 14, 2026
Saturday, November 14, 2026
spot_img

ಪ್ರೀತಿಗಾಗಿ ವಿಶ್ವದ ಗಮನ ಸೆಳೆದ ಜೋಡಿಗೆ ಈಗ ಗಡಿಪಾರು ಭೀತಿ: ಎಂಪೈರ್ ಸ್ಟೇಟ್ ಬಿಲ್ಡಿಂಗ್ ಏರಿದ ರಷ್ಯನ್ ಪ್ರೇಮಿಗಳಿಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೀತಿಯ ಸಂದೇಶ ಸಾರಲು ವಿಶ್ವಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ತುತ್ತತುದಿಯನ್ನೇ ಏರಿದ್ದ ರಷ್ಯಾದ ಜೋಡಿಗೆ ಇದೀಗ ಅಮೆರಿಕದಿಂದ ಗಡಿಪಾರು ಭೀತಿ ಎದುರಾಗಿದೆ. ಕಟ್ಟಡದ ತುದಿಯಲ್ಲಿ ನಿಂತು ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರಿದ್ದ ಈ ಜೋಡಿ, ಈಗ ಕಾನೂನು ಹೋರಾಟದಲ್ಲಿ ಸಿಲುಕಿದೆ.

ಪ್ರೀತಿಯ ಸಂದೇಶದೊಂದಿಗೆ ಜಗತ್ತಿನ ಗಮನ ಸೆಳೆದ ಜೋಡಿ

33 ವರ್ಷದ ಏಂಜೆಲಾ ನಿಕೊಲಾವ್ ಮತ್ತು 32 ವರ್ಷದ ಇವಾನ್ ಕುಜ್ನೆತ್ಸೋವ್ ಕಳೆದ ಜುಲೈನಲ್ಲಿ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಅತ್ಯಂತ ಎತ್ತರದ ಭಾಗವನ್ನು ಏರಿದ್ದರು. ಬಳಿಕ ಅಲ್ಲಿ ‘ಅಧಿಕಾರದ ಮೇಲಿನ ಪ್ರೀತಿಗಿಂತ ಪ್ರೀತಿಯ ಶಕ್ತಿ ಗೆದ್ದಾಗ ಜಗತ್ತಿಗೆ ಶಾಂತಿ ಸಿಗುತ್ತದೆ’ ಎಂಬ ಸಂದೇಶವಿದ್ದ ಧ್ವಜವನ್ನು ಪ್ರದರ್ಶಿಸಿದ್ದರು. ಇದೇ ಸಂದರ್ಭದಲ್ಲಿ ಇವಾನ್, ಏಂಜೆಲಾಗೆ ಮದುವೆಯ ಪ್ರಸ್ತಾಪ ಮಾಡಿದ್ದು, ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಪ್ರಾಸಿಕ್ಯೂಷನ್ ಜೊತೆಗಿನ ಒಪ್ಪಂದ ಕೊನೇ ಕ್ಷಣದಲ್ಲಿ ರದ್ದು

ಆದರೆ, ಈ ಸಾಹಸವೇ ಇದೀಗ ಅವರಿಗೆ ಸಂಕಷ್ಟ ತಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಮಾಣದ ಅಪರಾಧ ಆರೋಪಗಳನ್ನು ಒಪ್ಪಿಕೊಳ್ಳುವ ಮೂಲಕ ಕಾನೂನು ಮತ್ತು ವಲಸೆ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಜೋಡಿಯ ವಕೀಲರು ಪ್ರಾಸಿಕ್ಯೂಷನ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ವಿಚಾರಣೆಗೆ ಹಿಂದಿನ ರಾತ್ರಿ ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯ ಇಮೇಲ್ ಬಳಿಕ ಈ ಒಪ್ಪಂದ ರದ್ದಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

ನವೆಂಬರ್ 12ರಂದು ನ್ಯಾಯಾಲಯಕ್ಕೆ ಹಾಜರಾದ ಏಂಜೆಲಾ ಭಾವುಕರಾಗಿದ್ದರು. ಈ ವೇಳೆ ಮಾತನಾಡಿದ ಇವಾನ್, ಕಟ್ಟಡಕ್ಕೆ ಯಾವುದೇ ಹಾನಿ ಮಾಡಿಲ್ಲ, ಯಾರಿಗೂ ಅಪಾಯ ಉಂಟುಮಾಡುವ ಉದ್ದೇಶವಿರಲಿಲ್ಲ. ಕೇವಲ ಪ್ರೀತಿಯ ಸಂದೇಶ ಸಾರಲು ಬಯಸಿದ್ದೆವು ಎಂದಿದ್ದಾರೆ.

ಇದನ್ನೂ ಓದಿ:

ಒಂದು ವೇಳೆ ರಷ್ಯಾಕ್ಕೆ ವಾಪಸ್ ಕಳುಹಿಸಿದರೆ ಇವಾನ್ ಅವರನ್ನು ಉಕ್ರೇನ್ ಯುದ್ಧಕ್ಕೆ ಕಳುಹಿಸುವ ಸಾಧ್ಯತೆಯಿದೆ ಹಾಗೂ ಏಂಜೆಲಾಗೆ ಜೈಲು ಶಿಕ್ಷೆಯಾಗಬಹುದು ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.

ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲೂ ಮಿಂಚಿದ್ದ ಪ್ರೇಮಿಗಳು

2024ರಲ್ಲಿ ಬಿಡುಗಡೆಯಾದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ಸ್ಕೈವಾಕರ್ಸ್: ಎ ಲವ್ ಸ್ಟೋರಿ’ ಕೂಡ ಈ ಜೋಡಿಯ ಪ್ರೇಮ ಮತ್ತು ಸಾಹಸಮಯ ಜೀವನವನ್ನು ಪರಿಚಯಿಸಿತ್ತು. ಪ್ರೀತಿಯ ಸಂದೇಶದಿಂದ ಜಗತ್ತಿನ ಗಮನ ಸೆಳೆದಿದ್ದ ಜೋಡಿ ಈಗ ತಮ್ಮ ಭವಿಷ್ಯ ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸುವಂತಾಗಿದೆ.

Must Read