ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಡಕಟ್ಟು ಸಮುದಾಯಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅವರ ಕಲ್ಯಾಣಕ್ಕೆ ಆದ್ಯತೆ ನೀಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಸ್ವಾತಂತ್ರ್ಯಾನಂತರವೂ ಬುಡಕಟ್ಟು ಜನರ ಹಕ್ಕುಗಳಿಗೆ ಸೂಕ್ತ ಮಾನ್ಯತೆ ದೊರೆಯಲಿಲ್ಲ ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರ ಬುಡಕಟ್ಟು ಸಮುದಾಯಗಳ ಜೀವನಮಟ್ಟ ಸುಧಾರಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭಾನುವಾರ ನಡೆದ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ದೇಶದ ವಿವಿಧ ಭಾಗಗಳ ಬುಡಕಟ್ಟು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 151ನೇ ಜನ್ಮಜಯಂತಿಯ ಮಹತ್ವವನ್ನು ಸ್ಮರಿಸಿದರು.
ನಮ್ಮ ಸರ್ಕಾರ ಜನರಿಗೆ ಹಕ್ಕುಗಳನ್ನು ಕಲ್ಪಿಸಿದೆ
ಗುಜರಾತ್ನ ಭರೂಚ್ ಜಿಲ್ಲೆಯ ವಾಜಿರ್ ಎಂಬ ಫಲಾನುಭವಿಯೊಂದಿಗೆ ಮಾತನಾಡಿದ ಮೋದಿ, ಬ್ರಿಟಿಷರ ಕಾಲದಲ್ಲಿ ಬಿದಿರನ್ನು ಮರವೆಂದು ವರ್ಗೀಕರಿಸಿ ಕಡಿಯುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸ್ವಾತಂತ್ರ್ಯ ಬಂದ ನಂತರವೂ ಹಿಂದಿನ ಸರ್ಕಾರಗಳು ಈ ಕಾನೂನನ್ನು ರದ್ದುಗೊಳಿಸಲಿಲ್ಲ ಎಂದು ಟೀಕಿಸಿದರು. ತಮ್ಮ ಸರ್ಕಾರ ಬಿದಿರಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿ ಬುಡಕಟ್ಟು ಜನರಿಗೆ ಹಕ್ಕುಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.
ಇದೇ ವೇಳೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕೃಷ್ಣ ನಾಗೋರಾವ್ ಟೆಕಾ ಅವರು ಪಿಎಂ-ಜನ್ಮನ್ ಯೋಜನೆಯಡಿ ಮನೆ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಪಡೆದ ಅನುಭವ ಹಂಚಿಕೊಂಡರು. ಈ ಯೋಜನೆ ತಮ್ಮ ಕುಟುಂಬದ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಹೇಳಿದರು. ಹೈದರಾಬಾದ್ನ ವಿದ್ಯಾರ್ಥಿ ಅನ್ವೇಶ್ ಅವರು ಪಿಎಂ ಶ್ರೀ ಶಾಲೆಗಳ ಉಪಕ್ರಮದಿಂದ ಶಿಕ್ಷಣಕ್ಕೆ ನೆರವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
246 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ
ಕಾರ್ಯಕ್ರಮದಲ್ಲಿ ಸುಮಾರು 3,000 ಕೋಟಿ ರೂ. ಮೌಲ್ಯದ 246 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. 38 ಏಕಲವ್ಯ ಮಾದರಿ ವಸತಿ ಶಾಲೆಗಳು, 100 ಬಹುಪಯೋಗಿ ಕೇಂದ್ರಗಳು ಸೇರಿದಂತೆ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಸೇರಿವೆ.
ಬುಡಕಟ್ಟು ಸಮುದಾಯಗಳ ಹಕ್ಕುಗಳ ರಕ್ಷಣೆ, ಶಿಕ್ಷಣದ ವಿಸ್ತರಣೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯ ಫಲ ಕಟ್ಟಕಡೆಯ ಜನರಿಗೂ ತಲುಪಬೇಕು ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.



