ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಪವಿತ್ರ ಕ್ಷೇತ್ರ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರುಶನಕ್ಕೆಂದು ಮಹಾರಾಷ್ಟ್ರದ ಪುಣೆಯಿಂದ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲ್ಲದಿನ್ನಿ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕನೂ ಬಲಿಯಾಗಿದ್ದು, ಕುಟುಂಬದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಪುಣೆಯಿಂದ ಸವದತ್ತಿ ಯಲ್ಲಮ್ಮನ ಗುಡ್ಡದತ್ತ ತೆರಳುತ್ತಿದ್ದ ಕಾರು ಮತ್ತು ಯರಗಟ್ಟಿಯಿಂದ ಗೋಕಾಕ ಕಡೆಗೆ ಬರುತ್ತಿದ್ದ ಲಾರಿ ನಡುವೆ ಮಲ್ಲದಿನ್ನಿ ಕ್ರಾಸ್ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೃತರು, ಗಾಯಾಳುಗಳ ವಿವರ
ಅಪಘಾತದಲ್ಲಿ ಮೃತಪಟ್ಟವರನ್ನು ಪುಣೆ ಮೂಲದ ಓಂಕಾರ್ ಚಂದ್ರಶೇಖರ್ ಮಾಂಡ್ರೆ (26), ರೇಷ್ಮಾ ಮಾಂಡ್ರೆ (32) ಮತ್ತು 4 ವರ್ಷದ ಬಾಲಕ ದೇವಾಂಶ್ ಮಾಂಡ್ರೆ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಶ್ರೀಕಾಂತ್ ಮಾಂಡ್ರೆ, ವಂದನಾ ಮಾಂಡ್ರೆ ಮತ್ತು ಹರ್ಷದಾ ಮಾಂಡ್ರೆ ಅವರಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:
ಪೊಲೀಸರ ಭೇಟಿ, ಪ್ರಕರಣ ದಾಖಲು
ವಿಷಯ ತಿಳಿದ ತಕ್ಷಣ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



