November 15, 2026
Sunday, November 15, 2026
spot_img

ಖಾಲಿ ಸಚಿವ ಸ್ಥಾನಕ್ಕೆ ಮಹಿಳಾ ಸದಸ್ಯೆಗೆ ಮಣೆ: ಹೈಕಮಾಂಡ್ ಮುಂದೆ ಸಿಎಂ ಡಿಕೆಶಿ ಪ್ರಸ್ತಾವನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಖಾಲಿ ಇರುವ ಸಚಿವ ಸ್ಥಾನಗಳ ಪೈಕಿ ಒಂದನ್ನು ಮಹಿಳಾ ಸದಸ್ಯೆಗೆ ನೀಡುವ ಪ್ರಸ್ತಾವನೆಯನ್ನು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಪುಟಕ್ಕೆ ಮಹಿಳಾ ಸಚಿವೆಯ ಸೇರ್ಪಡೆಯ ನಿರೀಕ್ಷೆ ಮತ್ತೆ ಹೆಚ್ಚಾಗಿದೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಈಗಾಗಲೇ ತಮ್ಮ ಪ್ರಸ್ತಾವನೆಯನ್ನು ಗಮನಕ್ಕೆ ತೆಗೆದುಕೊಂಡಿದೆ. ನಾಯಕತ್ವದಿಂದ ಕರೆ ಬಂದಾಗ ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿದರು. ಸೋಮವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದು, ಅಲ್ಲಿ ಚರ್ಚೆಗೆ ಅವಕಾಶ ಸಿಗುತ್ತದೆಯೇ ಎಂಬುದು ಇನ್ನೂ ಖಚಿತವಿಲ್ಲ ಎಂದರು.

ಇದನ್ನೂ ಓದಿ:

ರಾಜ್ಯ ವಿಧಾನಮಂಡಲದ ಮುಂದಿನ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟಕ್ಕೆ ಮಹಿಳಾ ಸದಸ್ಯೆಯೊಬ್ಬರನ್ನು ಸೇರಿಸಿಕೊಳ್ಳುವ ಬಗ್ಗೆ ಕಳೆದ ವಾರವೂ ಡಿಕೆಶಿ ಸುಳಿವು ನೀಡಿದ್ದರು. ಇದೀಗ ಹೈಕಮಾಂಡ್ ಮುಂದೆ ಪ್ರಸ್ತಾವನೆ ಇಟ್ಟಿರುವುದಾಗಿ ಬಹಿರಂಗಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ 11ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಅದಕ್ಕೂ ಮುನ್ನ ಸಂಪುಟ ವಿಸ್ತರಣೆ ಅಥವಾ ಖಾಲಿ ಸ್ಥಾನಗಳ ಭರ್ತಿ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

Must Read

Skip to toolbar