November 15, 2026
Sunday, November 15, 2026
spot_img

ಬೀದರ್-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಮಹಿಳೆ ಸಾ*ವು, 7 ಜನರಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಯಾದಗಿರಿ:

ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸಮೀಪದ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಹಾಪುರ ಪಟ್ಟಣದ ರಾಜಶೇಖರ ಗಂಧದಮಠ ಹಾಗೂ ಅವರ ಕುಟುಂಬಸ್ಥರು ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಬೆಳಿಗ್ಗೆ ಕ್ರೂಸರ್ ವಾಹನದಲ್ಲಿ ಪ್ರಯಾಣ ಆರಂಭಿಸಿದ್ದರು. ಬೆಳಿಗ್ಗೆ ಸುಮಾರು 7.30ರ ವೇಳೆಗೆ ತಿಂಥಣಿ ಗ್ರಾಮದ ಮಹಾದ್ವಾರದ ಸಮೀಪ ವಾಹನ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿ, ರಸ್ತೆ ಪಕ್ಕದ ಜಮೀನಿನ ಕಡೆಗೆ ಉರುಳಿ ಬಿದ್ದಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಮಂಗಲಾ ಕಲ್ಲಯ್ಯ ಸ್ವಾಮಿ ಹಿರೇಮಠ (54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜಶೇಖರ ಗಂಧದಮಠ, ರೂಪಾ ರಾಜಶೇಖರ ಗಂಧದಮಠ, ಮಂಜುಳಾ ಶಿವಾನಂದ ಗಂಧದಮಠ, ವೀರೇಶ ಹಿರೇಮಠ, ಬಸ್ಸಮ್ಮ ಬಸಯ್ಯ ಟೊಣ್ಣೂರು, ರಕ್ಷಿತಾ ರಾಜಶೇಖರ ಗಂಧದಮಠ ಹಾಗೂ ಶಿವಕುಮಾರ ಗೋಲಗೇರಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:

ಗಾಯಾಳುಗಳನ್ನು ಸುರಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರಾದ ಶಿವಾನಂದ ಹಿರೇಮಠ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದರಾಯ ಬಳೂರ್ಗಿ ತಿಳಿಸಿದ್ದಾರೆ.

Must Read

Skip to toolbar