November 16, 2026
Monday, November 16, 2026
spot_img

ವಿಜಯ್ ಹಾದಿ ಹಿಡಿಯುತ್ತಾರಾ ಧನುಷ್? ಅಭಿಮಾನಿಗಳ ಪರವಾಗಿ ಸಾಯಿ ಪಲ್ಲವಿ ಇಟ್ಟ ಬೇಡಿಕೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ರಾಮಾಯಣ’ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ನಟಿ ಸಾಯಿ ಪಲ್ಲವಿ, ಇದೀಗ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಓಂ: ಚಾಪ್ಟರ್ ಒನ್’ (O.M: Chapter One) ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟ ಧನುಷ್ ಅವರ ಬಳಿ ಭಾವುಕ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಂತೆ ರಾಜಕೀಯಕ್ಕೆ ಬಂದು ನಟನೆಯನ್ನು ನಿಲ್ಲಿಸಬೇಡಿ ಎಂದು ಸಾಯಿ ಪಲ್ಲವಿ ವೇದಿಕೆಯಲ್ಲೇ ಕೋರಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಬರುವ ದಾರಿಯುದ್ದಕ್ಕೂ ಕಂಡುಬಂದ ಬಾವುಟಗಳನ್ನು ನೋಡಿ ಅಚ್ಚರಿಗೊಂಡ ಸಾಯಿ ಪಲ್ಲವಿ, “ಇದು ಸಿನಿಮಾ ಕಾರ್ಯಕ್ರಮವೋ ಅಥವಾ ರಾಜಕೀಯ ಸಮಾವೇಶವೋ ಎಂಬಂತಿದೆ” ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ ಧನುಷ್ ಅವರತ್ತ ತಿರುಗಿ, “ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮಗೆ ಒಳ್ಳೆಯದಾಗಲಿ. ಆದರೆ ವಿಜಯ್ ಸರ್ ರಾಜಕೀಯಕ್ಕೆ ಹೋಗಿ ನಟನೆ ನಿಲ್ಲಿಸಿರುವುದನ್ನು ನನ್ನೊಳಗಿನ ಕಲಾವಿದೆ ಸದಾ ನೆನೆಯುತ್ತಿರುತ್ತಾಳೆ. ಹಾಗಾಗಿ ನೀವು ಮಾತ್ರ ನಟನೆಯನ್ನು ಮುಂದುವರಿಸಬೇಕು ಎಂದು ನಾನು ಪ್ರಾರ್ಥಿಸುತ್ತೇನೆ” ಎಂದರು.

ಧನುಷ್ ಅವರ ನಟನೆಯ ತಾಕತ್ತನ್ನು ಕೊಂಡಾಡಿದ ಸಾಯಿ ಪಲ್ಲವಿ, “ಧನುಷ್ ಅವರು ಆಯ್ಕೆ ಮಾಡಿಕೊಳ್ಳುವ ನೈಜ ಕಥೆಗಳು ಮತ್ತು ಅವರ ಅಭಿನಯ ಪ್ರೇಕ್ಷಕರ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ‘ಪೊಲ್ಲಾಧವನ್’ ಸಿನಿಮಾ ಬಂದ ಮೇಲೆ ಎಷ್ಟೋ ಯುವಕರು ಅದೇ ಬೈಕ್ ಖರೀದಿಸಿ, ಅವರ ಸ್ಟೈಲ್ ಅನುಸರಿಸಿದ್ದರು. ಅಂತಹ ಪ್ರಭಾವ ಬೀರಲು ಒಬ್ಬ ನಿಜವಾದ ನಟನಿಂದ ಮಾತ್ರ ಸಾಧ್ಯ. ನೀವು ಯಾವುದೇ ಹಾದಿ ಹಿಡಿದರೂ ದಯವಿಟ್ಟು ನಟಿಸುವುದನ್ನು ನಿಲ್ಲಿಸಬೇಡಿ, ಇಲ್ಲದಿದ್ದರೆ ನಾವು ಒಬ್ಬ ಅದ್ಭುತ ನಟನನ್ನು ಕಳೆದುಕೊಳ್ಳುತ್ತೇವೆ” ಎಂದು ಮನವಿ ಮಾಡಿದರು.

ಕಳೆದ ಜೂನ್‌ನಲ್ಲಿ ಧನುಷ್ ಅವರ ತಂದೆ, ನಿರ್ದೇಶಕ ಕಸ್ತೂರಿ ರಾಜಾ ಅವರು “ಪಕ್ಷ ಕಟ್ಟುವುದಿದ್ದರೆ ಕಟ್ಟುತ್ತಾನೆ, ಇಲ್ಲದಿದ್ದರೆ ಇಲ್ಲ, ನನ್ನ ಮಗ ಮತ್ತು ಮೊಮ್ಮಕ್ಕಳಿಗೂ ರಾಜಕೀಯಕ್ಕೆ ಬರುವ ಹಕ್ಕಿದೆ” ಎಂದು ಮಾರ್ಮಿಕವಾಗಿ ಹೇಳಿದ್ದರು. ಜುಲೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಧನುಷ್ ಸಹ “ಸಿನಿಮಾಗಿಂತ ದೊಡ್ಡ ಉದ್ದೇಶವನ್ನು ಕಂಡುಕೊಳ್ಳಿ” ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ವಿಜಯ್ ಮುಖ್ಯಮಂತ್ರಿಯಾದ ಬೆನ್ನಲ್ಲೇ, ಧನುಷ್ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಧನುಷ್ ಇನ್ನೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

Must Read