November 15, 2026
Sunday, November 15, 2026
spot_img

ಅಧಿಕಾರಕ್ಕೆ ಬರಬೇಕಾದರೆ ವಿದೇಶ ಪ್ರವಾಸ ಬಿಡಿ, ಹಳ್ಳಿಗಳಿಗೆ ಭೇಟಿ ಕೊಡಿ: ರಾಹುಲ್ ಗಾಂಧಿಗೆ ಅಮಿತ್ ಶಾ ಟಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ವೇದಿಕೆಗಳಲ್ಲಿ ಭಾರತ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುವ ಮೂಲಕ ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಟೀಕಿಸುವುದರಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅಧಿಕಾರದ ಕನಸು ಕಾಣುತ್ತಿದ್ದರೆ ವಿದೇಶ ಪ್ರವಾಸ ನಿಲ್ಲಿಸಿ, ದೇಶದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅರಿಯಬೇಕು ಎಂದು ತಿರುಗೇಟು ನೀಡಿದ್ದಾರೆ.

ಹತಾಶಗೊಂಡು ಟೀಕಿಸುತ್ತಿದ್ದಾರೆ

ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ರಾಷ್ಟ್ರೀಯ ಭಾರೀ ಎಂಜಿನಿಯರಿಂಗ್ ಸಹಕಾರ ಸಂಸ್ಥೆಯ ಪುನಶ್ಚೇತನ ಉಪಕ್ರಮಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸತತ ಚುನಾವಣಾ ಸೋಲುಗಳಿಂದ ಹತಾಶಗೊಂಡು ದೇಶ ಮತ್ತು ಅದರ ನಾಯಕತ್ವವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಟೀಕಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:

ರಾಹುಲ್ ಗಾಂಧಿ ದೇಶದ ಘನತೆಗೆ ಧಕ್ಕೆ ತಂದಿದ್ದಾರೆ

ನವೆಂಬರ್ 13 ಮತ್ತು 14ರಂದು ಹೈದರಾಬಾದ್‌ನಲ್ಲಿ ತೆಲಂಗಾಣ ಕಾಂಗ್ರೆಸ್ ಸರ್ಕಾರ ಆಯೋಜಿಸಿದ್ದ ‘ಭಾರತ್ ಶೃಂಗಸಭೆ’ಯನ್ನು ಪ್ರಸ್ತಾಪಿಸಿದ ಶಾ, ದೇಶಿ-ವಿದೇಶಿ ಎಡಪಂಥೀಯ ಚಿಂತನೆಯ ಪ್ರತಿಪಾದಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಭಾರತ ವಿರೋಧಿ ವಿಚಾರಗಳನ್ನು ಮಂಡಿಸುವ ಮೂಲಕ ದೇಶದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಚುನಾವಣಾ ಸೋಲುಗಳ ಬಗ್ಗೆ ನಾಯಕತ್ವವನ್ನು ಪ್ರಶ್ನಿಸಬೇಕು. ಇದೇ ರಾಜಕೀಯ ಧೋರಣೆ ಮುಂದುವರಿದರೆ ಕಾಂಗ್ರೆಸ್ ಇನ್ನೂ 30 ವರ್ಷ ಅಧಿಕಾರದಿಂದ ದೂರ ಉಳಿಯಬೇಕಾಗಬಹುದು ಎಂದು ಎಚ್ಚರಿಸಿದರು.

2004ರಿಂದ 2014ರವರೆಗಿನ ಯುಪಿಎ ಆಡಳಿತದಲ್ಲಿ 12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಶಾ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ಪ್ರತಿಪಾದಿಸಿದರು.

ಕೃಷಿ, ಕೈಗಾರಿಕೆ, ಬಾಹ್ಯಾಕಾಶ, ರೈಲ್ವೆ, ವಿಮಾನಯಾನ, ಶಿಕ್ಷಣ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಸಾಧನೆಯಿಂದ ಹಿಡಿದು ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 76ರಿಂದ 150ಕ್ಕೆ ಹೆಚ್ಚಿಸುವವರೆಗೆ ಹಲವು ಬದಲಾವಣೆಗಳಾಗಿವೆ ಎಂದರು.

Must Read