ಹೊಸದಿಗಂತ ಶಿವಮೊಗ್ಗ:
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆ.21 ರಂದು ನಗರದಲ್ಲಿ ನಮೋ ಯುವ ರನ್ ಆಯೋಜಿಸಲಾಗಿದೆ. ಅಂದು ಮ್ಯಾರಾಥಾನ್ ಓಟ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಮಾತ್ರ ಮ್ಯಾರಥಾನ್ ಓಟ ನಡೆಯಲಿದೆ.
ಅಂದು ಬೆಳಿಗ್ಗೆ 6.30 ಕ್ಕೆ ನೆಹರೂ ಕ್ರೀಡಾಂಗಣದಿಂದ 3.5 ಕಿಮೀ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರರಾಜ್ ಮುನಿರಾಜು, ಸಂಸದ ಬಿ.ವೈ.ರಾಘವೇಂದ್ರ, ಎಲ್ಲಾ ಜನಪ್ರತಿನಿಧಿಗಳು, ನಟಿ ಕಾರುಣ್ಯರಾಮ್, ನಟ ಗೌರಿ ಶಂಕರ್, ಚೆಸ್ ಆಟಗಾರ ಸ್ಟ್ಯಾನಿ, ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ನೆಹರೂ ಕ್ರೀಡಾಂಗಣದಿಂದ ಆರಂಭವಾಗಿ ಮಹಾವೀರ ಸರ್ಕಲ್, ಬಿಹೆಚ್ ರಸ್ತೆ, ಸಾವರ್ಕರ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್, ಕುವೆಂಪು ರಸ್ತೆ ಮೂಲಕ ಪುನಃ ನೆಹರೂ ಕ್ರೀಡಾಂಗಣ ತಲುಪಲಿದೆ. ಇದೇ ವೇಳೆ ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 18 ವಯೋಮಿತಿಗಿಂತ ಕೆಳಗಿನ ಯುವಕ ಮತ್ತು ಯುವತಿಯರು ಪ್ರತ್ಯೇಕ, 18 ರಿಂದ 45 ವರ್ಷದ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಹಾಗೂ 45 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಒಟ್ಟು ಆರು ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 5000 ರೂ., ದ್ವಿತೀಯ 3000 ರೂ. ಹಾಗೂ ತೃತೀಯ 2000 ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.