November 18, 2026
Wednesday, November 18, 2026
spot_img

‘ಅಮೃತ್ ಮಹಲ್’ ಗೋವುಗಳ ಸಾಕಾಣಿಕೆಗೆ ಮುಡಿಪಾಗಿರುವ ಕುಟುಂಬ: ದೇಸಿ ತಳಿ ಸಂರಕ್ಷಕರಿಗೆ ಬೇಕಿದೆ ಸರ್ಕಾರದ ನೆರವು

ಎಂ.ಜೆ.ತಿಪ್ಪೇಸ್ವಾಮಿ

ಹೊಸದಿಗಂತ ವರದಿ ಚಿತ್ರದುರ್ಗ:

ಗೋವು ಹಿಂದೂಗಳಿಗೆ ಪೂಜ್ಯನೀಯ ಪ್ರಾಣಿ. ಅದನ್ನು ಕಾಮದೇನು ಸ್ವರೂಪ ಎಂದು ಭಾವಿಸುವವರು ಉಂಟು. ಈಗ ದೇಸಿ ಹಸುಗಳ ಜಾಗದಲ್ಲಿ ಮಿಶ್ರತಳಿ ಆಕಳು ಬಂದಿವೆ. ಹೈನುಗಾರಿಕೆ ಹೆಸರಿನಲ್ಲಿ ಜನರು ಮಿಶ್ರತಳಿ ಆಕಳುಗಳ ಮೊರೆ ಹೋಗಿದ್ದಾರೆ. ಅಲ್ಲದೇ ಆಧುನಿಕತೆಯ ಪ್ರಭಾಕ್ಕೆ ಒಳಗಾಗಿರುವ ಜನರು ದನಕರುಗಳನ್ನು ಸಾಕುವುದನ್ನೇ ಮರೆತಿದ್ದಾರೆ. ಇದರಿಂದಾಗಿ ದೇಸಿ ಹಸುಗಳ ಸಂಖ್ಯೆಯ ಗಣನೀಯವಾಗಿ ಕುಸಿತ ಕಂಡಿದೆ. ಹಾಗಾಗಿ ದೇಸಿ ತಳಿ ಗೋವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ.

ಆದರೆ ಚಿತ್ರದುರ್ಗ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದ ಪಿ.ಎಸ್.ರಂಗಸ್ವಾಮಿ ಅವರ ಕುಟುಂಬ ಸದ್ದಿಲ್ಲದೇ ಹಲವು ದೇಸಿ ತಳಿಯ ಗೋವುಗಳ ಸಾಕಾಣಿಕೆಯಲ್ಲಿ ತೊಡಗಿದೆ. ಕಳೆದ ನಾಲ್ಕು ದಶಕಗಳ ಕಾಲ ಪಶುಸಂಗೋಪನೆಯಲ್ಲಿ ಸಲ್ಲಿಸಿದ ಸೇವಾನುಭವ ಬಳಸಿಕೊಂಡು ವಿನಾಶದ ಅಂಚಿನಲ್ಲಿರುವ ಅಪರೂಪದ ’ಅಮೃತ ಮಹಲ್’ ತಳಿಯ 70 ರಿಂದ 80 ರಾಸುಗಳನ್ನು ಸಾಕುತ್ತಿದ್ದಾರೆ. 4 ಎಕರೆ ಜಮೀನು ಹೊಂದಿರುವ ಇವರು ಹಸುಗಳ ಮೇವಿಗಾಗಿ 2 ಎಕರೆ ಮೀಸಲಿಟ್ಟಿದ್ದಾರೆ. ಅದರಲ್ಲಿ ಬೆಳೆದ ಮೇವನ್ನು ಗೋವುಗಳ ಸಾಕಾಣಿಕೆಗೆ ಬಳಸುತ್ತಿದ್ದಾರೆ.

ಗೋವುಗಳನ್ನು ಒಂದೆಡೆ ಕೂಡಿ ಹಾಕಲು ತಮ್ಮ ಜಮೀನಿನ ಒಂದಷ್ಟು ಜಾಗದಲ್ಲಿ ಮುಳ್ಳಿನ ಬೇಲಿ ಹಾಕಿ ರೊಪ್ಪ ನಿರ್ಮಿಸಿದ್ದಾರೆ. ಕುಡಿಯುವ ನೀರಿಗಾಗಿ ತೊಟ್ಟಿ ಕಟ್ಟಿಸಿದ್ದಾರೆ. ಹಗಲು ವೇಳೆಯಲ್ಲಿ ಗ್ರಾಮದ ಗೋಮಾಳ, ಜಮೀನುಗಳ ಬದುವಿನಲ್ಲಿ ಮೇಯಿಸಕೊಂಡು ಬರುವ ಗೋವುಗಳನ್ನು ಸಂಜೆ ರೊಪ್ಪದಲ್ಲಿ ಕೂಡಿ ಹಾಕಲಾಗುತ್ತದೆ. ಬಹುತೇಕ ಹಸುಗಳು ತಮ್ಮ ಕರುಗಳಿಗೆ ಹಾಲುಣಿಸುತ್ತವೆ. ಕೇವಲ ಮನೆ ಬಳಕೆಗೆ ಒಂದೆರಡು ಹಸುಗಳಿಂದ ಹಾಲು ಪಡೆಯಲಾಗುತ್ತದೆ. ಈ ಕುಟುಂಬ ಹೈನುಗಾರಿಕೆ ಮಾಡುವುದಿಲ್ಲ. ಈ ಸೇವೆಯನ್ನು ಗುರುತಿಸಿ ಮುರುಘಾಮಠ ಇವರನ್ನು ಸನ್ಮಾನಿಸಿ ಗೌರವಿಸಿದೆ.

ಇದನ್ನೂ ಓದಿ:

ಪ್ರತಿದಿನ 3-4ಗಾಡಿಯಷ್ಟು ಸಗಣಿ ಲಭ್ಯವಾಗುತ್ತದೆ. ತಿಂಗಳಿಗೆ 2 ರಿಂದ 3 ಟ್ರ್ಯಾಕ್ಟರ್ ಲೋಡು ಗಬ್ಬರವಾಗುತ್ತದೆ. ಪ್ರತಿದಿನ ರೊಪ್ಪ ಸ್ವಚ್ಛ ಮಾಡಲು ನಾಲ್ಕೈದು ಗಂಟೆಗಳ ಸಮಯ ಬೇಕು. ಹಸುಗಳಿಂದ ಬರುವ ಹೋರಿಕರುಗಳನ್ನು ಮಾರಾಟ ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಡೆಸುವ ವಾಡಿಕೆ ಇದೆ. ಹಾಗಾಗಿ ಅಲ್ಲಿಯ ರೈತರು ಹೆಚ್ಚಾಗಿ ಇವರ ಬಳಿಯ ರಾಸುಗಳನ್ನು ಖರೀದಿಸುತ್ತಾರೆ. ಹೀಗೆ ಮಾರಾಟ ಮಾಡುವ ಹೋರಿಕರುಗಳನ್ನು ಕನಿಷ್ಠ 3-4 ರ್ಷಗಳ ಕಾಲ ಸಾಕಿ ಸಲಹಬೇಕು ಎನ್ನುತ್ತಾರೆ ರಂಗಸ್ವಾಮಿ.

ಇವರು ಸಾಕುವ ಹೋರಿಕರುಗಳಿಗೆ ಉತ್ತಮ ಬೇಡಿಕೆ ಇದೆ. ಹೀಗೆ ಮಾರಾಟದಿಂದ ಬರುವ ಹಾಗೂ ರಾಸುಗಳ ಗೊಬ್ಬರ ಮಾರಿ ಬಂದ ಹಣದಿಂದ ಈ ಕುಟುಂಬ ಜೀವನ ನಡೆಸುತ್ತಿದೆ. ರಂಗಸ್ವಾಮಿ, ಮಕ್ಕಳಾದ ಮಾರುತಿ, ಗೋವರ್ಧನ್ ಮತ್ತು ಕುಟುಂಬದ ಇತರೆ ಸದಸ್ಯರು ಗೋಸಂರಕ್ಷಣೆಗೆ ಜೀವನ ಮುಡಿಪಾಗಿಟ್ಟಿದ್ದಾರೆ. ಪಶು ಸಂಗೋಪನೆಯನ್ನೇ ನಂಬಿ ಬದುಕುತ್ತಿರುವ ಈ ಕುಟುಂಬಕ್ಕೆ ಆಳುವ ಸರ್ಕಾರಗಳು ಅಗತ್ಯ ನೆರವು ನೀಡಬೇಕಿದೆ. ಇದರಿಂದ ಮತ್ತಷ್ಟು ದೇಸಿ ತಳಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂಬುದು ಈ ಕುಟುಂಬದ ಬಯಕೆ.

Must Read

Skip to toolbar