July 21, 2026
Tuesday, July 21, 2026
spot_img

‘ದೀಪಿಕಾ ವಿದ್ಯಾರ್ಥಿ ವೇತನ’ ಲೋಕಾರ್ಪಣೆ: ಇನ್ಮುಂದೆ ವಿದ್ಯಾರ್ಥಿನಿಯರಿಗೆ ಸಿಗಲಿದೆ 30,000 ಸ್ಕಾಲರ್‌ಶಿಪ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂದು ಉನ್ನತ ಶಿಕ್ಷಣ ಇಲಾಖೆ ಮತ್ತು ಅಜಿಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗಾಗಿ (ದೀಪಿಕಾ) ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ.ಗಳಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ‘ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮದಿಂದ ಲಾಭವಾಗಲಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜ ಅಜೀಂ ಪ್ರೇಂಜಿ ಅವರು ಅಜೀಂ ಪ್ರೇಂಜಿ ಫೌಂಡೇಶನ್ ನ ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಠಿಯಿಂದ ದೀಪಿಕಾ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.

ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ರೂ.30,000 ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು. ಈ ಯೋಜನೆಯ ಲಾಭ ಪಡೆಯಬೇಕಾದರೆ, ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತೀರ್ಣರಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಾಗಿದ್ದು, ಇಂತಹ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !